ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮೇ 20 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಮೂರು ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ, ಈ ಕಾರ್ಯಕ್ರಮದ ಸಂದರ್ಭದಲ್ಲಿ, "ದಾಖಲೆರಹಿತ ವಾಸಸ್ಥಳಗಳನ್ನು" ಕಂದಾಯ ಗ್ರಾಮಗಳೆಂದು ಘೋಷಿಸಲಾದ ಅರ್ಹ ಫಲಾನುಭವಿಗಳಿಗೆ ಒಂದು ಲಕ್ಷ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಮತ್ತು ವಿವಿಧ ಇಲಾಖೆಗಳಿಂದ ಕಾರ್ಯಕ್ರಮಗಳು ಸಹ ಇರುತ್ತವೆ, ಈ ವೇಳೆ ಕಳೆದ ಎರಡು ವರ್ಷಗಳ ನಮ್ಮ ಸಾಧನೆಗಳನ್ನು ಜನರಿಗೆ ತಿಳಿಸಲು ಪ್ರಯತ್ನಿಸುತ್ತೇವೆ" ಎಂದು ಅವರು ಹೇಳಿದರು.
ಬಿಬಿಎಂಪಿ ಬದಲು ನಿನ್ನೆಯಷ್ಟೆ ಜಾರಿಗೆ ಬಂದಿರುವ ಗ್ರೇಟರ್ ಬೆಂಗಳೂರಿಗೆ ಶೀಘ್ರದಲ್ಲೇ ಚುನಾವಣೆ ನಡೆಸುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಸಿಎಂ, ಗ್ರೇಟರ್ ಬೆಂಗಳೂರಿಗೆ ಶೀಘ್ರವೇ ಚುನಾವಣೆ ಮಾಡುತ್ತೇವೆ. ಕ್ಯಾಬಿನೆಟ್ ನಲ್ಲಿ ಎಲ್ಲರೂ ಒಪ್ಪಿದ್ದಾರೆ. ಶೀಘ್ರವೇ ಸಬ್ ಕಮಿಟಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಗ್ರೇಟರ್ ಬೆಂಗಳೂರು ಅಲ್ಲ ಕ್ವಾಟರ್ ಬೆಂಗಳೂರು ಎಂಬ ಆರ್ ಅಶೋಕ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೊದಲೇ ವಿರೋಧ ಮಾಡಬಹುದಿತ್ತು. ಆದರೆ ಅಶೋಕ್ ಮಾಡಲಿಲ್ಲ. ವಿಪಕ್ಷ ನಾಯಕನಾಗಿ ಅಷ್ಟು ಟೀಕೆ ಮಾಡದಿದ್ರೆ ಹೇಗೆ? ಅವರಿಗೆ ನಾವು ಗೌರವ ಕೊಡುತ್ತೇವೆ. ಆದರೆ ಅವರೇ ಗ್ರೇಟರ್ ಬೆಂಗಳೂರಿಗೆ ಸಲಹೆಗಳನ್ನು ಕೊಟ್ಟಿದ್ದಾರೆ. ಯಾಕೆ ಕೊಟ್ರು? ಎಂದು ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಮುಳುಗಿದ ಎಂಎಸ್‌ವಿ ಸಲಾಮತ್ ಸರಕು ಸಾಗಣೆ ಹಡಗಿನ ಆರು ಸಿಬ್ಬಂದಿಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ (ಐಸಿಜಿ) ಯಶಸ್ವಿಯಾಗಿ ರಕ್ಷಿಸಿದೆ. ಈ ಹಡಗು ಕರಾವಳಿಯಿಂದ ನೈಋತ್ಯಕ್ಕೆ ಸುಮಾರು 60-70 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮುಳುಗುತ್ತಿತ್ತು. ಅದರಲ್ಲಿದ್ದ ಆರು ಸಿಬ್ಬಂದಿಗಳು ಸಣ್ಣ ದೋಣಿ ಮೂಲಕ ಜೀವ ಉಳಿಸಿಕೊಂಡಿದ್ದರು. ಈ ಪ್ರದೇಶದಲ್ಲಿ ದಿನನಿತ್ಯದ ಗಸ್ತು ತಿರುಗುತ್ತಿದ್ದ ಐಸಿಜಿ ಹಡಗು ವಿಕ್ರಮ್ ಅನ್ನು ತಕ್ಷಣವೇ ಸ್ಥಳಕ್ಕೆ ತೆರಳಿದ್ದು ಆರು ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. ಈ ಹಡಗು ಮಂಗಳೂರು ಬಂದರಿನಿಂದ ಲಕ್ಷದ್ವೀಪದ ಕದ್ಮತ್ ದ್ವೀಪಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಮತ್ತೊಂದು ಪ್ರಕರಣದಲ್ಲಿ ಸರಕು ಸಾಗಣೆ ಹಡಗಿನಲ್ಲಿ ಕಾರವಾರ ಬಂದರಿಗೆ ಆಗಮಿಸಿದ ಪಾಕಿಸ್ತಾನಿ ಪ್ರಜೆಗೆ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದು, ವಾಪಾಸ್ ಕಳುಹಿಸಿದ್ದಾರೆ. ಇರಾಕ್ ನಿಂದ ಬಿಟುಮೆನ್ ಸಾಗಿಸುತ್ತಿದ್ದ MTR ಓಶಿಯನ್ ಹಡಗಿನಲ್ಲಿ 14 ಭಾರತೀಯ ಸಿಬ್ಬಂದಿ, ಇಬ್ಬರು ಸಿರಿಯನ್ನರು ಒಬ್ಬ ಪಾಕಿಸ್ತಾನಿ ಪ್ರಜೆ ಇದ್ದರು. ಪಾಕಿಸ್ತಾನ ಮತ್ತು ಭಾರತ ನಡುವಿನ ಸಂಬಂಧ ಹದಗೆಟ್ಟಿರುವ ಕಾರಣ ಪಾಕಿಸ್ತಾನಿ ಮತ್ತು ಸಿರಿಯಾ ಪ್ರಜೆಗಳು ಹಡಗಿನಿಂದ ಇಳಿಯದಂತೆ ಪೊಲೀಸ್ ಇನ್ಸ್‌ಪೆಕ್ಟರ್ ನಿಶ್ಚಲ್ ಕುಮಾರ್ ಸೂಚನೆ ನೀಡಿದ್ದರು.
ಆಪರೇಷನ್ ಸಿಂದೂರ್ ಕಾರ್ಯಾಚರಣೆ ಬಗ್ಗೆ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ನಕಾರಾತ್ಮಕ ಹೇಳಿಕೆ ನೀಡಿ ಲೇವಡಿ ಮಾಡಿದ್ದಾರೆ. ಆಪರೇಷನ್ ಸಿಂಧೂರ್ ಹೆಸರಲ್ಲಿ ಭಾರತ ಬೂಟಾಟಿಕೆಗೆ ನಾಲ್ಕು ಯುದ್ಧ ವಿಮಾನಗಳನ್ನು ಪಾಕ್ ಮೇಲೆ ಕಳುಹಿಸಿದ್ದು ಬಿಟ್ಟರೆ ಮತ್ತೇನು ಮಾಡಿಲ್ಲ. 26 ಜನ ಮಹಿಳೆಯರ ಅರಶಿನ ಕುಂಕುಮಕ್ಕೆ ಬೆಲೆ ಇಷ್ಟೇನಾ ಎಂದು ಮಂಜುನಾಥ್ ಪ್ರಶ್ನಿಸಿದ್ದಾರೆ. ತಮ್ಮ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಶಾಸಕ, ನಾನು ಸೇನೆಯ ಕಾರ್ಯಾಚರಣೆಯನ್ನು ಲೇವಡಿ ಮಾಡಿಲ್ಲ, ಬದಲಾಗಿ ಮೊದಲು ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರರನ್ನು ಹತ್ಯೆ ಮಾಡಿ ಬಳಿಕ ಪಾಕ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಬೇಕಿತ್ತು ಎಂಬ ಅಭಿಪ್ರಾಯ ಹೇಳಿದ್ದೆ ಎಂದು ಯುಟರ್ನ್ ಹೊಡೆದಿದ್ದಾರೆ.
ಬೆಂಗಳೂರಿನ ಪ್ರಸಿದ್ಧ ಹರೇ ಕೃಷ್ಣ ದೇವಾಲಯ ನಿಯಂತ್ರಣದ ಬಗ್ಗೆ ದಶಕದ ಸುದೀರ್ಘ ಕಾನೂನು ಹೋರಾಟ ತಾರ್ಕಿಕ ಅಂತ್ಯ ತಲುಪಿದ್ದು, ಸುಪ್ರೀಂ ಕೋರ್ಟ್ ಇಸ್ಕಾನ್ ಬೆಂಗಳೂರು ಪರವಾಗಿ ತೀರ್ಪು ನೀಡಿ, ಇಸ್ಕಾನ್ ಮುಂಬೈನ ಮಾಲೀಕತ್ವದ ಹಕ್ಕುಗಳನ್ನು ಕೊನೆಗೊಳಿಸಿದೆ. ಈ ಹಿಂದೆ ಇಸ್ಕಾನ್ ದೇವಸ್ಥಾನದ ನಿಯಂತ್ರಣವನ್ನು ಮುಂಬೈ ಇಸ್ಕಾನ್ ಗೆ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇಸ್ಕಾನ್ ಬೆಂಗಳೂರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.
Advertisement