ಬೆಂಗಳೂರಿನಲ್ಲಿ ಕನ್ನಡಿಗರ ಅವಹೇಳನ ಪ್ರಕರಣಗಳು ದಿನಕಳೆದಂತೆ ಹೆಚ್ಚಾಗುತ್ತಿವೆ. ಮತ್ತೊಂದು ಘಟನೆಯಲ್ಲಿ ಕೋರಮಂಗಲದಲ್ಲಿ ಕನ್ನಡಿಗರನ್ನು ಅವಾಚ್ಯವಾಗಿ ನಿಂದಿಸಿರುವುದು ವರದಿಯಾಗಿದೆ. ಕೋರಮಂಗಲದ ನೆಕ್ಸಸ್ ಮಾಲ್ ಬಳಿ ಇರುವ ಕೇರಳ ಮೂಲದ ನೌಶಾದ್ ಮಾಲೀಕತ್ವದ ಜಿಎಸ್ ಸೂಟ್ಸ್ ಹೋಟೆಲ್ ನಲ್ಲಿ ನಿನ್ನೆ ರಾತ್ರಿ ಹೋಟಲ್ ಗೆ ಅಳವಡಿಸಿದ್ದ ಡಿಸ್ ಪ್ಲೇ ಬೋರ್ಡ್ ನಲ್ಲಿ ಕನ್ನಡಿಗರು ತಲೆ ಹಿಡುಕರು ಎಂದು ಬರೆಯಲಾಗಿತ್ತು. ಇದನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಹೋಟೆಲ್ ಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಹೊಟೇಲ್ ಮಾಲಿಕರ ವಿರುದ್ಧ FIR ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆಪರೇಷನ್ ಸಿಂಧೂರ್ ಮೂಲಕ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ದ ಪ್ರತೀಕಾರ ತೀರಿಸಿಕೊಂಡಿರುವ ಭಾರತ, ಇದೀಗ ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನ ಉಗ್ರ ಮುಖವಾಡವನ್ನು ಬಯಲು ಮಾಡಲು ಪಣ ತೊಟ್ಟಿದೆ. ಇದರ ಭಾಗವಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗವನ್ನು ವಿದೇಶಕ್ಕೆ ಕಳುಹಿಸಲು ನಿರ್ಧರಿಸಿದೆ. ತಲಾ 5 ಸಂಸದರನ್ನು ಒಳಗೊಂಡ 5-6 ಸಂಸದರ ನೇತೃತ್ವದ ನಿಯೋಗವೊಂದನ್ನು ವಿಶ್ವದ ವಿವಿಧ ದೇಶಗಳಿಗೆ ಕಳಿಸಲಿರುವ ಕೇಂದ್ರ ಸರ್ಕಾರ, ಆಪರೇಷನ್ ಸಿಂಧೂರಕ್ಕೆ ಕಾರಣವಾದ ಅಂಶಗಳು, ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವ ವಿಚಾರಗಳ ಕುರಿತು ವಿದೇಶಿ ನಾಯಕರಿಗೆ ವಿವರಿಸಲಿದೆ. ಈ ನಿಯೋಗ ಮೇ.22ರಿಂದ ವಿದೇಶ ಪ್ರವಾಸ ಆರಂಭಿಸಲಿದ್ದು, ಅಮೆರಿಕಾ, ಬ್ರಿಟನ್, ದಕ್ಷಿಣ ಆಫ್ರಿಕಾ, ಕತಾರ್, ಯುಎಇ ಮತ್ತಿತರ ದೇಶಗಳಿಗೆ ಪ್ರವಾಸ ಮಾಡಲಿದೆ. ಈ ಮಧ್ಯೆ ಶಶಿ ತರೂರ್ ಅವರನ್ನು ಸರ್ವಪಕ್ಷ ನಿಯೋಗಕ್ಕೆ ನೇಮಕ ಮಾಡಿರುವುದರ ಬಗ್ಗೆ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಸರ್ವಪಕ್ಷ ನಿಯೋಗಕ್ಕೆ ತಾನು ನೀಡಿರುವ ಸಂಸದರ ಹೆಸರನ್ನು ಹೊರತುಪಡಿಸಿ ಶಶಿ ತರೂರ್ ಅವರನ್ನು ನೇಮಕ ಮಾಡಿದ್ದು ಅಪ್ರಾಮಾಣಿಕ ನಡೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದರೆ, ರಾಷ್ಟ್ರದ ಹಿತಾಸಕ್ತಿ ವಿಚಾರದಲ್ಲಿ ನನಗೆ ಜವಾಬ್ದಾರಿ ನೀಡಿರುವುದು ಗೌರವ ತಂದಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ.
ಖಾಸಗಿ ವೈದ್ಯಕೀಯ ಕಾಲೇಜುಗಳ ಒತ್ತಡದ ಹೊರತಾಗಿಯೂ, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ರಚನೆಯಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಖಾಸಗಿ ಕಾಲೇಜುಗಳು ಶೇ. 10 ರಿಂದ 15 ರಷ್ಟು ಶುಲ್ಕ ಹೆಚ್ಚಳಕ್ಕೆ ಮನವಿ ಮಾಡಿದ್ದವು, ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಳೆದ ವರ್ಷ ಸರ್ಕಾರ ಶೇ. 10 ರಷ್ಟು ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಿತ್ತು ಮತ್ತು ಈ ವರ್ಷ ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದರು.
ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ವಿಭಾಗದಲ್ಲಿ ರೈಲ್ವೆ ವಿದ್ಯುದೀಕರಣ ಕಾರ್ಯ ನಡೆಯುತ್ತಿರುವುದರಿಂದ ಜೂನ್ 1 ರಿಂದ ಮಂಗಳೂರು ಮತ್ತು ಬೆಂಗಳೂರು ನಡುವಿನ ಕೆಲವು ಹಗಲಿನ ರೈಲು ಸೇವೆಗಳನ್ನು 154 ದಿನಗಳವರೆಗೆ ಸ್ಥಗಿತಗೊಳಿಸಲಾಗುವುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಪ್ರಯಾಣಿಕರ ಸಂಘಗಳು ಮತ್ತು ಪ್ರಯಾಣ ಸಮಿತಿಗಳು ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸಮಾಲೋಚನೆಯ ಕೊರತೆ ಮತ್ತು ಪರ್ಯಾಯ ವ್ಯವಸ್ಥೆಗಳ ಕೊರತೆಯನ್ನು ಉಲ್ಲೇಖಿಸಿವೆ. ಸಾರ್ವಜನಿಕ ಅನುಕೂಲಕ್ಕೆ ಅಡ್ಡಿಯಾಗದಂತೆ ಕೆಲಸವನ್ನು ನಿರ್ವಹಿಸುವಂತೆ ಅವರು ರೈಲ್ವೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಇತ್ತೀಚಿನ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ವೇಳೆಯಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದರಿಂದ ಟರ್ಕಿ ಹಾಗೂ ಅಜರ್‌ಬೈಜಾನ್ ದೇಶಗಳ ವಿರುದ್ಧ ಬಹಿಷ್ಕಾರ ಅಭಿಯಾನ ಆರಂಭವಾಗಿದೆ. ತಕ್ಷಣದಿಂದಲೇ ಟರ್ಕಿ ಮತ್ತು ಅಜರ್‌ಬೈಜಾನ್‌ಗೆ ಬಟ್ಟೆ ಆಮದು ಮತ್ತು ರಫ್ತುಗಳನ್ನು ನಿಲ್ಲಿಸಲು ಬೆಂಗಳೂರು ಸಗಟು ಬಟ್ಟೆ ವ್ಯಾಪಾರಿಗಳ ಸಂಘ (BWCMA) ನಿರ್ಧರಿಸಿದೆ. ರಾಷ್ಟ್ರೀಯ ಭಾವನೆ ಮತ್ತು ವ್ಯಾಪಾರಿ ಸಮುದಾಯದ ಹಿತಾಸಕ್ತಿಯ ಬದ್ಧತೆಗೆ ಅನುಗುಣವಾಗಿ ಮಾಲೋಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು BWCMA ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. BWCMA ಬೆಂಗಳೂರಿನಾದ್ಯಂತ ಸುಮಾರು 3,000 ಸಗಟು ಅಂಗಡಿಗಳ ಸಂಘವಾಗಿದೆ. ಈ ದೇಶಗಳೊಂದಿಗೆ ಕೋಟ್ಯಂತರ ರೂ. ಮೌಲ್ಯದ ವ್ಯಾಪಾರ ನಡೆಯುತ್ತಿದೆ.
Advertisement