ತಿರುಪತಿ ತಿಮ್ಮಪ್ಪನಿಗೆ 100 ಕೆಜಿ ಅಖಂಡ ಬೆಳ್ಳಿ ದೀಪ ಅರ್ಪಿಸಿದ ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ
ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ತಿರುಮಲ ತಿರುಪತಿ ದೇವಸ್ಥಾನಕ್ಕೆ 100 ಕೆಜಿ ತೂಕದ ಅಖಂಡ ಬೆಳ್ಳಿ ದೀಪಗಳನ್ನು ಅರ್ಪಿಸಿ 300 ವರ್ಷಗಳ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದ್ದಾರೆ.
ಆಳೆತ್ತರದ ಬೆಳ್ಳಿ ದೀಪಗಳು ಇನ್ನುಮುಂದೆ ತಿರುಮಲ ದೇವಸ್ಥಾನಕ್ಕೆ ಬೆಳಗಲಿವೆ. ಭಕ್ತಿ ಮತ್ತು ರಾಜ ಪರಂಪರೆಯ ಸಂಕೇತವಾಗಿ ಮೈಸೂರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ತಿರುಮಲ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ಎರಡು ದೊಡ್ಡ ಬೆಳ್ಳಿ ದೀಪಗಳನ್ನು ದಾನ ಮಾಡಿದರು.
ರಂಗನಾಯಕಕುಲ ಮಂಟಪದಲ್ಲಿ ನಡೆದ ಅಧಿಕೃತ ಹಸ್ತಾಂತರ ಸಮಾರಂಭದಲ್ಲಿ ದೇವಾಲಯ ಆಡಳಿತದ ಪರವಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧ್ಯಕ್ಷ ಬಿ.ಆರ್. ನಾಯ್ಡು ಅವರು ಈ ಕಾಣಿಕೆಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೂ ಉಪಸ್ಥಿತರಿದ್ದರು.
ಸರಿಸುಮಾರು 100 ಕೆಜಿ ತೂಕವಿರುವ ಈ ಬೆಳ್ಳಿ ದೀಪಗಳನ್ನು ಶಾಶ್ವತ ದೀಪಗಳಾಗಿ ಬಳಸಲಾಗುತ್ತದೆ. ಹಗಲು-ರಾತ್ರಿ ದೇವಾಲಯದ ಗರ್ಭಗುಡಿಯಲ್ಲಿ ಬೆಳಗುತ್ತಿರುವ ಅಖಂಡ ದೀಪಗಳನ್ನು ದೈವಿಕತೆಯ ಶಾಶ್ವತ ಉಪಸ್ಥಿತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.