ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಸರ್ಕಾರ 6ನೇ ಗ್ಯಾರಂಟಿಯಾಗಿ ಭೂ ಮಾಲೀಕತ್ವ ನೀಡುವ ಭೂ ಗ್ಯಾರಂಟಿಯನ್ನು ಜಾರಿ ಮಾಡಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಹೇಳಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಆಯೋಜಿಸಿದ್ದ ಸಮರ್ಪಣಾ ಸಂಕಲ್ಪ ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡಿದ ರಾಹುಲ್ ಗಾಂಧಿ, ನಮ್ಮ ಸರ್ಕಾರ 5 ಗ್ಯಾರೆಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಈಗ ಭೂ ಮಾಲೀಕತ್ವದ 6ನೇ ಗ್ಯಾರಂಟಿಯನ್ನು ಜಾರಿ ಮಾಡುತ್ತಿದ್ದೇವೆ, ರಾಜ್ಯದಲ್ಲಿ ಲಕ್ಷಾಂತರ ಜನ ಭೂಮಿಯ ಅನುಭವದಲ್ಲಿದ್ದರೂ ಅವುಗಳ ಮಾಲೀಕತ್ವದ ಹಕ್ಕು ಹೊಂದಿರಲಿಲ್ಲ. ಇದನ್ನು ಗಮನಿಸಿ ನಾನು ಇಂತಹವರಿಗೆ ಹಕ್ಕುಪತ್ರ ನೀಡುವಂತೆ ಸೂಚಿಸಿದ್ದೆ ಎಂದು ಹೇಳಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಕಾರ್ಯಕ್ರಮ ನಕಲಿ, ಬಿಜೆಪಿಯವರು ಹೇಳುತ್ತಿರುವುದು ಸತ್ಯವಾದರೆ ಇಲ್ಲಿ ಲಕ್ಷಾಂತರ ಜನ ಸೇರುತ್ತಲೇ ಇರಲಿಲ್ಲ, ನಾವು ನುಡಿದಂತೆ ನಡೆದಿದ್ದೇವೆ ಅದಕ್ಕೇ ನಮ್ಮ ಮೇಲೆ ಜನರಿಗೆ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಬಿಜೆಪಿ ನಾಯಕರುಗಳ ನಿಯೋಗ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಶಾಸಕ ಸತೀಶ್‌ರೆಡ್ಡಿ, ಸಿ.ಕೆ. ರಾಮಮೂರ್ತಿ ಸೇರಿದಂತೆ ಹಲವು ನಾಯಕರು ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಭೇಟಿ ನೀಡಿ ಮಳೆಯಿಂದಾದ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾದರೂ ಅಭಿವೃದ್ಧಿ ಕಾರ್ಯ ಮಾಡದೆ ಕೇವಲ ಭ್ರಷ್ಟಾಚಾರ, ಹಗರಣ ಮತ್ತು ಬೆಲೆಯೇರಿಕೆಯಲ್ಲೇ ಸಾಧನೆ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಬ್ಯಾಡ್ ಬೆಂಗಳೂರು ಪೋಸ್ಟರ್‌ಗಳನ್ನು ಪ್ರದರ್ಶಿಸಿದರು.
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆ ಸುರಿದಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ ರಾಜ್ಯದಾದ್ಯಂತ ನಾಲ್ವರು ಮೃತಪಟ್ಟಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 3 ಸಾವುಗಳು ಸಂಭವಿಸಿವೆ. ವೈಟ್ ಫೀಲ್ಡ್ ನಲ್ಲಿ ಕಾಂಪೌಂಡ್ ಗೋಡೆ ಕುಸಿದು ಮಹಿಳೆ ಮೃತಪಟ್ಟ ಬೆನ್ನಲ್ಲೇ ಇನ್ನೂ ಇಬ್ಬರು ಸಾವನ್ನಪ್ಪಿದ್ದಾರೆ. ಎನ್ಎಸ್ ಪಾಳ್ಯದ ಮಧುವನ ಅಪಾರ್ಟ್ಮೆಂಟ್ ಬೇಸ್ಮೆಂಟ್ನಲ್ಲಿ ಮೋಟಾರ್ ಮೂಲಕ ನೀರು ಹೊರಹಾಕಲು ಯತ್ನಿಸುತ್ತಿದ್ದಾಗ ಕರೆಂಟ್ ಶಾಕ್ ತಗುಲಿ ಅಪಾರ್ಟ್ಮೆಂಟ್ ನಿವಾಸಿ ಮನೋಹರ ಕಾಮತ್ ಮತ್ತು ನೇಪಾಳ ಮೂಲದ 9 ವರ್ಷದ ಬಾಲಕ ದಿನೇಶ್ ಮೃತಪಟ್ಟಿದ್ದಾರೆ. ಮತ್ತೊಂದು ಘಟನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ತಮ್ಮಣ್ಣಿ ಗೌಡ ಈಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಈಮಧ್ಯೆ, ಹವಾಮಾನ ಇಲಾಖೆ ಕರಾವಳಿ ಮತ್ತು ದಕ್ಷಿಣ ಒಳನಾಡು ಸೇರಿ ಒಟ್ಟು 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು ಇನ್ನೂ 1 ವಾರ ಭಾರೀ ಮಳೆ ಮುನ್ಸೂಚನೆ ನೀಡಿದೆ. ಮತ್ತೊಂದೆಡೆ, ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯಗಳನ್ನು ಬಿಸಿಸಿಐ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಏಕಾನಾ ಕ್ರೀಡಾಂಗಣಕ್ಕೆ ವರ್ಗಾವಣೆ ಮಾಡಿದೆ. ಟೂರ್ನಿಯಲ್ಲಿ ಈಗಾಗಲೇ ತಲಾ 17 ಅಂಕಗಳೊಂದಿಗೆ ಆರ್ ಸಿಬಿ ಪ್ಲೇ ಆಫ್ ಹಂತಕ್ಕೇರಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೆ 23ರಂದು ನಡೆಯಬೇಕಿದ್ದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಲಕ್ನೋಗೆ ಶಿಫ್ಟ್ ಮಾಡಲಾಗಿದೆ.
ಬೆಂಗಳೂರಿನ ನಿವಾಸಿಯೊಬ್ಬರು ಬಿಬಿಎಂಪಿ ಕಾನೂನು ನೋಟಿಸ್ ಜಾರಿ ಮಾಡಿದ್ದು, ಪಾಲಿಕೆ ಸಾರ್ವಜನಿಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮತ್ತು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಡಾ. ದಿವ್ಯಾ ಕಿರಣ್ ಬಿಬಿಎಂಪಿಗೆ ನೊಟೀಸ್ ಜಾರಿಗೊಳಿಸಿದ್ದು, ಸಾರ್ವಜನಿಕ ರಸ್ತೆಗಳನ್ನು ನಿರ್ವಹಿಸದ ಕಾರಣ ಉಂಟಾದ ದೈಹಿಕ ನೋವನ್ನು, ಭಾವನಾತ್ಮಕ ಮತ್ತು ಆರ್ಥಿಕ ಹೊರೆಯನ್ನು ಅನುಭವಿಸಿದ್ದಕ್ಕಾಗಿ ₹50 ಲಕ್ಷ ಪರಿಹಾರವನ್ನು ಕೇಳಿದ್ದಾರೆ.
ಚುನಾವಣಾ ರಾಜಕೀಯಕ್ಕೆ ಸಹಕಾರ ಸಚಿವ ಕೆಎನ್ ರಾಜಣ್ಣ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ 75 ವರ್ಷ ಆಯ್ತು, ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಆದರೆ ಸಹಕಾರಿ ಕ್ಷೇತ್ರ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ.
Advertisement