
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಯುವತಿಯರ ವಿಡಿಯೋ ರೆಕಾರ್ಡ್ ಮಾಡಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ವಿಕೃತಿ ಮೆರೆದ ವಿಚಾರ ಬೆಳಕಿಗೆ ಬಂದಿದೆ.
metro_chicks ಖಾತೆಯಿಂದ 13ಕ್ಕೂ ಹೆಚ್ಚು ವಿಡಿಯೋ ಅಪ್‌ಲೋಡ್ ಮಾಡಲಾಗಿತ್ತು. ಈ ಖಾತೆಯನ್ನು 5,538 ಮಂದಿ ಫಾಲೋ ಮಾಡುತ್ತಿದ್ದರು.
ಮೆಟ್ರೋ ರೈಲಿನ ಒಳಗೆ, ನಿಲ್ದಾಣದಲ್ಲಿ ಹುಡುಗಿಯರ ಆಕ್ಷೇಪಾರ್ಹ ರೀತಿಯ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿತ್ತು. ಈ ಖಾತೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ವಿಡಿಯೋಗಳು ಡಿಲೀಟ್ ಆಗಿದೆ. ಇನ್‌ಸ್ಟಾ ಪೇಜ್ ವಿರುದ್ಧ ಬನಶಂಕರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಈಗ ಈ ವಿಡಿಯೋ ಅಪ್ಲೋಡ್ ಮಾಡಿದವರ ಪತ್ತೆಗೆ ಬಲೆ ಬೀಸಿದ್ದಾರೆ.
ಐಟಿ ಆ್ಯಕ್ಟ್ 2008 ಸೆಕ್ಷನ್ 67, ಬಿಎನ್ಎಸ್ 78(2)ರಡಿ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇನ್ನು ಈ ಬಗ್ಗೆ ಕೇಂದ್ರ ಬಿಜೆಪಿ ಸಂಸದ ಪಿಸಿ ಮೋಹನ್ ಟ್ವೀಟ್ ಮಾಡಿದ್ದು, ಇದು ಆಘಾತಕಾರಿ ಸಂಗತಿಯಾಗಿದೆ. ಇದು ಭಯಾನಕ ಅಪರಾಧ ಮಾತ್ರವಲ್ಲ, ಗಂಭೀರ ಅಪರಾಧವೂ ಆಗಿದೆ. ತಕ್ಷಣ ಬೆಂಗಳೂರು ಪೊಲೀಸರು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Advertisement