
ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕಂಡುಬಂದ ಹಲವಾರು ನ್ಯೂನತೆಗಳ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ನೀಡಿದ ನೋಟಿಸ್‌ಗೆ ಉತ್ತರಿಸಲು ವಿಫಲರಾದ ಕಾರಣ ಲೋಕಾಯುಕ್ತರು ಸಮನ್ಸ್ ಜಾರಿ ಮಾಡಿದ್ದಾರೆ.
ಜೂನ್ 23 ರಂದು ಖುದ್ದಾಗಿ ಹಾಜರಾಗುವಂತೆ ನಿರ್ದೇಶಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಸಮನ್ಸ್‌ಗೆ ಉತ್ತರಿಸಲು ವಿಫಲವಾದರೆ ವಾರಂಟ್ ಹೊರಡಿಸುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ಆಸ್ಪತ್ರೆ ವಿರುದ್ಧ ಹಲವಾರು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಪಾಟೀಲ್ ಮತ್ತು ಅವರ ತಂಡವು ನವೆಂಬರ್ 29, 2024 ರಂದು ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿತು. ಜೀವರಕ್ಷಕ ಔಷಧಿಗಳಿಲ್ಲ, ವೈದ್ಯರು ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ, ಹಾಜರಾತಿ ಪುಸ್ತಕದಲ್ಲಿ ಸಹಿ ನಮೂದಿಸುತ್ತಿರಲಿಲ್ಲ, ಆಸ್ಪತ್ರೆಯಲ್ಲಿ ಔಷಧಿಗಳು ಲಭ್ಯವಿದ್ದರೂ ಖಾಸಗಿ ಅಂಗಡಿಗಳಿಂದ ಔಷಧಿಗಳನ್ನು ಖರೀದಿಸಲು ರೋಗಿಗಳಿಗೆ ಸೂಚಿಸುವುದು, ಲಂಚಕ್ಕೆ ಬೇಡಿಕೆ ಇಡುವುದು, ನೈರ್ಮಲ್ಯವನ್ನು ಕಾಪಾಡಿಕೊಳ್ಳದಿರುವುದು ಇತ್ಯಾದಿ ಸೇರಿದಂತೆ ಹಲವಾರು ನ್ಯೂನತೆಗಳಿರುವುದು ಕಂಡು ಬಂದಿತ್ತು.
ಈ ವಿಷಯವನ್ನು ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು. ಈ ಸಂಬಂಧ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ವರದಿ ನೀಡುವಂತೆ ನೋಟಿಸ್ ನೀಡಲಾಗಿತ್ತು. ಆದರೂ ನೋಟಿಸ್‌ಗೆ ಉತ್ತರ ನೀಡಿರಲಿಲ್ಲ. ಹಾಗಾಗಿ ಜೂನ್ 23ರಂದು ಖುದ್ದು ಹಾಜರಾಗಿ ವರದಿಗೆ ಉತ್ತರ ನೀಡುವಂತೆ ಸಮನ್ಸ್ ಜಾರಿ ಮಾಡಲಾಗಿದೆ. ಈ ಸಮನ್ಸ್‌ಗೂ ಅವರು ಪ್ರತಿಕ್ರಿಯಿಸದಿದ್ದಲ್ಲಿ ವಾರಂಟ್ ನೀಡುವುದು ಅನಿವಾರ್ಯ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.
Advertisement