ಹನಿಟ್ರ್ಯಾಪ್ ಮತ್ತು ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ವಿಚಾರವಾಗಿ ವಿಧಾನಸಭೆಯಲ್ಲಿ ಚರ್ಚೆ ವೇಳೆ ಭಾರೀ ಗಲಾಟೆ ನಡೆಸಿ ಸ್ಪೀಕರ್ ಯು.ಟಿ ಖಾದರ್ ಮೇಲೆ ಪೇಪರ್ ತೂರಿ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿಯ 18 ಶಾಸಕರ ಅಮಾನತನ್ನು ವಾಪಸ್ ಪಡೆಯಲಾಗಿದೆ. ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ ಬಿಜೆಪಿಯ 18 ಶಾಸಕರನ್ನು 6 ತಿಂಗಳು ಕಾಲ ಅಮಾನತು ಮಾಡಲಾಗಿತ್ತು. ಆ ಬಳಿಕ ಈ ಅಮಾನತನ್ನು ವಾಪಸ್ ಪಡೆಯುವಂತೆ ಬಿಜೆಪಿ ಆಗ್ರಹಿಸುತ್ತಿತ್ತು. ಹೀಗಾಗಿ ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ಇಂದು ನಡೆದ ಸಂಧಾನ ಸಭೆಯಲ್ಲಿ ಈ ಅಮಾನತನ್ನು ಆದೇಶವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಹೀಗಾಗಿ ಸಂತೋಷದಿಂದ ಶಾಸಕರ ಅಮಾಮತು ಹಿಂಪಡೆದಿದ್ದೇನೆ. ಯಾವುದೇ ಷರತ್ತು ಇಲ್ಲ, ಎಲ್ಲರೂ ನಮ್ಮ ಮಿತ್ರರು ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದರು.
ಬೆಳಗಾವಿ ಸಮೀಪದ ಕಾರಂಜೋಲ್ ಮತ್ತು ಕ್ಯಾಸಲ್ ರಾಕ್ ನಡುವೆ ಇಂದು ಮುಂಜಾನೆ ವಾಸ್ಕೋಡಗಾಮಾ-ಯಶವಂತಪುರ ರೈಲಿನ ಬೋಗಿಯೊಂದು ಹಳಿತಪ್ಪಿದ ಪರಿಣಾಮ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಮುಂಜಾನೆ 2.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಆದರೆ ಕೆಲಕಾಲ ಈ ಮಾರ್ಗದಲ್ಲಿ ಇತರ ರೈಲು ಸಂಚಾರಕ್ಕೆ ಅಡಚಣೆ ಉಂಟಾಯಿತು. ಮತ್ತೊಂದೆಡೆ ಭಾರೀ ಮಳೆಯಿಂದಾಗಿ ಶಿರಾಡಿಘಾಟ್ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದೆ. ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಮಣ್ಣು ಕುಸಿದು ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ಹೀಗಾಗಿ ಬದಲಿ ಮಾರ್ಗದಲ್ಲಿ ಸಕಲೇಶಪುರದಿಂದ ಹಾಸನ ಮಾರ್ಗವಾಗಿ ಬೆಂಗಳೂರಿಗೆ ತೆರಳುವಂತೆ ವಾಹನ ಸವಾರರಿಗೆ ಪೊಲೀಸರು ಸೂಚನೆ ನೀಡಿದ್ದಾರೆ.
2019ರ ಆಡಿಯೋ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ವಿರುದ್ಧ ಇಲಾಖಾ ತನಿಖೆಗೆ ಸೂಚಿಸಿ ಮುಖ್ಯ ಕಾರ್ಯದರ್ಶಿ ನೀಡಿದ್ದ ನೋಟಿಸ್‌ಗೆ ಕೇಂದ್ರೀಯ ಆಡಳಿತ ನ್ಯಾಯಮಂಡಳಿ ತಡೆ ನೀಡಿದೆ. ಮಾಹಿತಿ ಹಕ್ಕು ಕಾಯಿದೆಯಡಿ ರಾಜ್ಯ ಸರ್ಕಾರವು 2024ರ ಮೇ 6ರಂದು ನೀಡಿದ ಉತ್ತರದ ಪ್ರಕಾರ ಇಲಾಖಾ ತನಿಖೆಯನ್ನು ಈಗಾಗಲೇ ಕೈಬಿಡಲಾಗಿದೆ. ಸಿಬಿಐ ಕೂಡ ಈ ಪ್ರಕರಣದಲ್ಲಿ B ರಿಪೋರ್ಟ್ ಸಲ್ಲಿಸಿದೆ. ಆಡಿಯೋ ಲೀಕ್ ಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಸಿಬಿಐ ನಿರ್ಣಾಯಕವಾಗಿ ದೃಢಪಡಿಸಿದೆ ಎಂದು ಅಲೋಕ್ ಕುಮಾರ್ ವಾದಿಸಿದ್ದಾರೆ. ಡಿಜಿ ಮತ್ತು ಐಜಿಪಿ ಹುದ್ದೆಗೆ ಪರಿಗಣಿಸಲು ಕೇಂದ್ರ ಲೋಕಸೇವಾ ಆಯೋಗಕ್ಕೆ ರವಾನಿಸಲು 2025ರ ಏಪ್ರಿಲ್ 23ರಂದು ನನ್ನ ವಿವರಗಳನ್ನು ತೆಗೆದುಕೊಂಡ ನಂತರ ಈ ನೋಟಿಸ್ ನೀಡಲಾಗಿದೆ ಎಂದು ಅಲೋಕ್ ಕುಮಾರ್ ಆರೋಪಿಸಿದ್ದಾರೆ.
ರೇವ್ ಪಾರ್ಟಿ ನಡೆಯುತ್ತಿದ್ದ ಫಾರ್ಮ್ ಹೌಸ್ ಮೇಲೆ ದೇವನಹಳ್ಳಿ ಪೋಲಿಸರು ದಾಳಿ ಮಾಡಿ ಹಲವರನ್ನು ವಶಕ್ಕೆ ಪಡೆದದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕನ್ನಮಂಗಲ ಗ್ರಾಮದ ಬಳಿ ನಿನ್ನೆ ರಾತ್ರಿಯಿಂದ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಯುವಕ-ಯುವತಿಯರು ಭಾಗಿಯಾಗಿದ್ದರು. ಇನ್ನು ದಾಳಿ ವೇಳೆ ಕೊಕೇನ್, ಹೈಡ್ರೋ ಡ್ರಗ್ಸ್ ಮತ್ತು ಗಾಂಜಾ ಪತ್ತೆ ಆಗಿದ್ದು, ವಶಕ್ಕೆ ಪಡೆಯಲಾಗಿದೆ. ಸ್ಥಳೀಯರು ನೀಡಿದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 10 ಯುವತಿಯರು, 20 ಯುವಕರ ತಪಾಸಣೆ ಮಾಡಲಾಗಿದ್ದು, ಸದ್ಯ ವಶಕ್ಕೆ ಪಡೆಯಲಾಗಿದ್ದು ದೇವನಹಳ್ಳಿ ಎಸಿಪಿ ನವೀನ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.
Advertisement