
ಬೆಂಗಳೂರು: ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ವಿಧಾನಸಭೆಯ ಸಭಾಂಗಣದ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ವಿಧಾನಸೌಧ ಗೈಡೆಡ್ ಟೂರ್‌ಗೆ ಇಂದು ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್, ಗೈಡೆಡ್ ಟೂರ್ ಅನ್ನು ಬಹಳ ಚಿಂತನೆ ಮಾಡಿ ಆರಂಭಿಸಲಾಗುತ್ತಿದೆ. ಇಂದಿನಿಂದ ವಿಧಾನಸೌಧ ಕಟ್ಟಡ ಸಾರ್ವಜನಿಕರ ಪ್ರವಾಸಕ್ಕೆ ಮುಕ್ತವಾಗಿದೆ. ಜಗತ್ತಿನಲ್ಲೇ ಅತ್ಯಂತ ಸುಂದರ ಕಟ್ಟಡ ವಿಧಾನಸೌಧವಾಗಿದ್ದು, ಪ್ರಜಾಪ್ರಭುತ್ವದ ದೇಗುಲ. ಆಸಕ್ತರಿಗೆ, ವಿದ್ಯಾರ್ಥಿಗಳಿಗೆ, ಜನರಿಗೆ ಇದರ ದರ್ಶನ ಮಾಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಗೈಡೆಡ್ ಟೂರ್ ಮನರಂಜನೆಯ ಪ್ರವಾಸ ಅಲ್ಲ. ಇಲ್ಲಿಗೆ ಬಂದವರು ಜ್ಞಾನ ಪಡೆದು ಹೋಗಬೇಕು, ತಮ್ಮ ಕನಸುಗಳಿಗೆ ಚುರುಕು ಕೊಡಬೇಕು, ಪ್ರಜಾಪ್ರಭುತ್ವ ಗಟ್ಟಿ ಮಾಡುವ ಛಲ ಬರಬೇಕು. ಒಮ್ಮೆ ಸುತ್ತಿ ಬರೋಣ ಅಂತ ಇಲ್ಲಿಗೆ ಬರೋದಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಹಿಂದೆ ನಾವು ವಿದ್ಯಾರ್ಥಿಗಳಾಗಿದ್ದಾಗ ವಿಧಾನಸೌಧ ನೋಡಲು ಬಂದಿದ್ದೆವು. ಆಗ ಪಾಸ್ ಕೇಳಿದ್ವಿ ಆದರೆ ಪಾಸ್ ಕೊಡಲು ನಿರಾಕರಿಸಿದರು. ಯಾಕೆ ಅಂದರೆ ನೀವೇ ಬಸವರಾಜ ಹೊರಟ್ಟಿ ಅನ್ನೋದಕ್ಕೆ ಏನು ಸಾಕ್ಷಿ ಅಂದರು. ಯಾವುದಾದರೂ ಐಡೆಂಟಿಟಿ ಕಾರ್ಡ್ ಕೇಳಿದರು ಇಲ್ಲ ಅಂದೆ. ಅದಕ್ಕೆ ಪಾಸ್ ಕೊಡಲೇ ಇಲ್ಲ. ಬಳಿಕ ಮತ್ತೊಬ್ಬರ ಮೂಲಕ ಪಾಸ್ ತೆಗೆದುಕೊಂಡು ವಿಧಾನಸೌಧ ನೋಡಿದೆವು. ಬಳಿಕ ಶಾಸಕರಾದ್ರೆ ಮಾತ್ರ ಇಲ್ಲಿಗೆ ಬರಲು ಸಾಧ್ಯ ಎಂದು ಹೇಳಿದ್ದರು ಎಂದು ಹಳೆಯ ನೆನಪು ಮೆಲುಕು ಹಾಕಿದರು.
ರಾಜಕೀಯ ಸ್ಟಡಿ ಮಾಡಲು ಪೊಲಿಟಿಕಲ್ ಕಾಲೇಜು ಮಾಡಲು ಚಿಂತನೆ: ವಿಧಾನಸೌಧದಲ್ಲಿ ಪುಸ್ತಕ ಮೇಳ ಮಾಡಿದ್ದೆವು. ಆಗ ಜನರನ್ನ ಒಳಗೆ ಬಿಟ್ವಿ. ಆದರೆ ಅನೇಕರು ಅದಕ್ಕೆ ವಿರೋಧ ಮಾಡಿದರು. ವಿಧಾನಸೌಧದ ಬಗ್ಗೆ ಎಲ್ಲರೂ ತಿಳಿಯಲಿ ಎಂಬುದು ನಮ್ಮ ಉದ್ದೇಶವಾಗಿದೆ. ರಾಜಕೀಯ ಸ್ಟಡಿ ಮಾಡಲು ಪೊಲಿಟಿಕಲ್ ಕಾಲೇಜು ಮಾಡಲು ಚಿಂತನೆ ಮಾಡಿದ್ದೇವೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಬಂದಿರೋ ಮಕ್ಕಳು ಕಾರ್ಯಕ್ರಮ ನೋಡಿ ಹೋಗ್ತೀರ. ಆದರೆ ರಾಜಕೀಯ ಅಂದ್ರೆ ಏನು ಅಂತ ಸ್ಟಡಿ ಮಾಡಲು ಅನುಕೂಲ ಆಗಲಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
ಜೂನ್ 1 ರಿಂದ ಪ್ರಾರಂಭ: ಶುಲ್ಕ ನಿಗದಿ
ಜೂನ್ 1ರಿಂದ ವಿಧಾನಸೌಧ ಟೂರ್ ಗೈಡ್ ಪ್ರಾರಂಭವಾಗಲಿದೆ. ವಯಸ್ಕರಿಗೆ ರೂ. 50, 16 ವರ್ಷ ಮೇಲ್ಪಟ್ಟ ವಯಸ್ಕರಿಗೆ ರೂ. 50 ಶುಲ್ಕ ನಿಗದಿಪಡಿಸಲಾಗಿದೆ. 15 ವರ್ಷ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ಪ್ರತಿ ಭಾನುವಾರ, 2 ಮತ್ತು 4ನೇ ಶನಿವಾರ ವಿಧಾನಸೌಧ ಟೂರ್ ವ್ಯವಸ್ಥೆ ಇರುತ್ತದೆ. ಬೆಳಗ್ಗೆ 8 ರಿಂದ ಸಂಜೆ 5 ಗಂಟೆಗೆ ಸಮಯ ನಿಗದಿ ಮಾಡಲಾಗಿದೆ.
ಇದಕ್ಕಾಗಿ ಆಸಕ್ತರು KSTDC ಆನ್ ಲೈನ್ ಮೂಲಕ ಬುಕ್ ಮಾಡಬೇಕು. 30 ಜನರನ್ನು ಒಳಗೊಂಡ ಗ್ರೂಪ್‌ನ್ನು ಪ್ರತಿ ಪ್ರವಾಸಕ್ಕೆ ನಿಗದಿ ಮಾಡಲಾಗುತ್ತದೆ. ಒಂದು ಗ್ರೂಪ್‌ಗೆ 90 ನಿಮಿಷಗಳ ಅವಧಿ ಇರಲಿದ್ದು, ಒಂದು ದಿನಕ್ಕೆ 300 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರಲಿದೆ.
ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಗೈಡ್ ಮಾಹಿತಿ ನೀಡುವರು. ವಿಧಾನಸೌಧದ ಗೇಟ್ ನಂಬರ್ 3ರಿಂದ ಪ್ರವೇಶ ಕಲ್ಪಿಸಲಾಗುವುದು.
Advertisement