
ಶಿವಮೊಗ್ಗ: ಮಂಗಳೂರಿನ ಕೊಳತ್ತಮಜಲು ಬಳಿ ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿಯ ಹತ್ಯೆ ಖಂಡನೀಯ. ಘಟನೆಗೆ ನೈಜ ಕಾರಣ ತಿಳಿದಿಲ್ಲ. ಈ ಸಂಬಂಧ ಈಗಾಗಲೇ ಗೃಹ ಸಚಿವರಾದ ಜಿ ಪರಮೇಶ್ವರ ಹಾಗೂ ಕಾನೂನು ಸುವ್ಯವಸ್ಥೆ ADGP ಜೊತೆ ಮಾತಾಡಿದ್ದೇನೆ ಎಂದು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ ಹೇಳಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಮುಸ್ಲಿಂ ಯುವಕನ ಹತ್ಯೆಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಇದು ಅತ್ಯಂತ ನೋವಿನ ಸಂಗತಿ. ಮಂಗಳೂರಿನ ಈ ಕೆಟ್ಟ ಪರಿಸ್ಥಿತಿಗೆ ಬಿಜೆಪಿ ಹಾಗೂ ಸಂಘ ಪರಿವಾರದವರು ಕಾರಣ. ಅವರದ್ದು ವಿಷ, ಕೊಳಕು ತುಂಬಿದ ಮನಸ್ಸು. ಅವರಿಗೆ ಮಾನವೀಯತೆ, ಮನುಷ್ಯತ್ವ ಯಾವುದು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಹಾಗೂ ಸಂಘ ಪರಿವಾರದವರಿಗೆ ಒಂದು ಶವ ಸಿಕ್ಕರೂ ಅದರ ಮೇಲೆ ರಾಜಕೀಯ ಮಾಡುತ್ತಾರೆ. ಬಿಜೆಪಿಯವರಿಗೆ ಮುಸ್ಲಿಮರ ಬಗ್ಗೆ ಕೆಟ್ಟ ಅಭಿಪ್ರಾಯ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸರಣಿ ಹತ್ಯೆ ಆಗುತ್ತಿರುವುದು ಜಿಲ್ಲೆ ಹಾಗೂ ರಾಜ್ಯಕ್ಕೂ ಕೆಟ್ಟ ಹೆಸರು. ಪೊಲೀಸರಿಗೆ ಪ್ರಾಥಮಿಕ ಸುಳಿವು ಸಿಕ್ಕಿದೆ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.
ದಕ್ಷಿಣ.ಕನ್ನಡ ಜಿಲ್ಲೆಯ ಶಾಂತಿ ಹಾಳು ಮಾಡುವ ದುಷ್ಟ ಯತ್ನವೊಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಘಟನೆಯು ಇದರ ಒಂದು ಭಾಗದಂತೆ ಕಾಣಿಸುತ್ತಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತಕ್ಕೆ ಕಠಿಣ ಸೂಚನೆ ನೀಡಿದ್ದೇನೆ. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಸಚಿವರು ಮನವಿ ಮಾಡಿದರು.
ದಕ್ಷಿಣ ಕನ್ನಡದಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆಯ ಬಗ್ಗೆ ಗೃಹ ಸಚಿವರು ಈ ಹಿಂದೆಯೇ ಹೇಳಿದ್ದಾರೆ. ಟಾಸ್ಕ್ ಫೋರ್ಸ್ ರಚನೆಗೆ ಎಲ್ಲಾ ವ್ಯವಸ್ಥೆ ನಡೀತಿದೆ. ಅಲ್ಲದೇ, ಆ್ಯಂಟಿ ಕಮ್ಯೂನಲ್ ಫೋರ್ಸ್ ಅನ್ನು ಮಾಡಬೇಕಾಗುತ್ತದೆ ಎಂದರು.
ಕೋಮುವಾದ ಸಮಾಜವನ್ನು ವಿಭಜನೆ ಮಾಡುತ್ತದೆ. ಕೋಮುವಾದದ ವಿರುದ್ಧ ಕಾನೂನು ಹಾಗೂ ಸಾಮಾಜಿಕ ಹೋರಾಟ ಮಾಡಬೇಕಾಗುತ್ತದೆ. ಪ್ರತಿ ಮನೆಯ ಹತ್ತಿರ ಪೊಲೀಸರು ಇರೋಕೆ ಆಗಲ್ಲ. ಮೊನ್ನೆ ಪ್ರಚೋದನಕಾರಿಯಾಗಿ ಕೆಲವರು ಭಾಷಣ ಮಾಡಿದ್ದರು. ಅವರ ಮೇಲೂ ಸಹ ಕೇಸ್ ಆಗಿದೆ. ಉದ್ರೇಕಕಾರಿ ಭಾಷಣವನ್ನು ಸಂಘ-ಪರಿವಾರದವರು ಹೆಚ್ಚಾಗಿ ಮಾಡುತ್ತಿದ್ದಾರೆ ಎಂದರು.
ಇದೇ ವೇಳೆ ಶರಣ್ ಪಂಪ್ವೆಲ್ ಬಂದ್ ಗೆ ಕರೆ ಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಪ್ರಚೋದನೆ ಮಾಡುವವರಿಗೆ ಇದೇ ಕೆಲಸ. ಹಿಂದುತ್ವದ ಅಡಿಯಲ್ಲಿ ರಕ್ಷಣೆ ತೆಗೆದುಕೊಳ್ಳುತ್ತಾರೆ. ಒಬ್ಬರನ್ನು ಸಾಯಿಸಿದರೆ ಧರ್ಮದ ಬೆಂಬಲವಿದೆ ಅಂದು ಕೊಳ್ಳುತ್ತಾರೆ. ಹಿಂದುತ್ವವನ್ನು ಉಪಯೋಗಿಸಿಕೊಂಡು, ಮಾಡಬಾರದ ಕೆಲಸ ಮಾಡುತ್ತಾರೆ. ಮರಳು ದಂಧೆ ಮಾಡುವವರು, ರೌಡಿಗಳನ್ನೂ ಸಹ ಉಪಯೋಗಿಸಿಕೊಳ್ಳುತ್ತಾರೆ. ಇದು ನಿಜವಾದ ವಸ್ತುಸ್ಥಿತಿ ಎಂದರು.
Advertisement