ಲೈಂಗಿಕ ಕಾರ್ಯಕರ್ತರು- ದೇವದಾಸಿಯರ ಮಕ್ಕಳಿಗೆ ತಂದೆಯ ಹೆಸರು ಕಡ್ಡಾಯ ನಿಯಮ ರದ್ದುಗೊಳಿಸಿ: NGO
ಬೆಂಗಳೂರು: ಲೈಂಗಿಕ ಕಾರ್ಯಕರ್ತರು, ಲಿಂಗ ಅಲ್ಪಸಂಖ್ಯಾತರು, ದೇವದಾಸಿಯರು ಮತ್ತು ಒಂಟಿ ಮಹಿಳೆಯರ ಮಕ್ಕಳಿಗೆ ಅಧಿಕೃತ ದಾಖಲೆಗಳಲ್ಲಿ ತಂದೆಯ ಹೆಸರನ್ನು ಕಡ್ಡಾಯಗೊಳಿಸುವುದನ್ನು ನಿಲ್ಲಿಸುವಂತೆ ಮಾನವ ಹಕ್ಕುಗಳ ಸಂಘಟನೆಯಾದ 'ಒಂಡೆಡೆ' ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದೆ.
ಶಾಲೆಗಳು ಮತ್ತೆ ತೆರೆಯಲು ಸಜ್ಜಾಗಿರುವುದರಿಂದ, ಅಂತಹ ಅವಶ್ಯಕತೆಗಳು ಶಿಕ್ಷಣಕ್ಕೆ ಅಡೆತಡೆಗಳನ್ನುಂಟುಮಾಡುತ್ತವೆ, ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಇಂತಹ ಸಮುದಾಯಗಳ ವಿರುದ್ಧ ತಾರತಮ್ಯ ಹೆಚ್ಚಿಸುತ್ತವೆ ಎಂದು ಸಂಘಟನೆ ಹೇಳಿದೆ.
ಈ ಸಮುದಾಯಗಳು ಮತ್ತು ಅವರ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಮತ್ತು ಅವುಗಳನ್ನು ಉಲ್ಲಂಘಿಸದಂತೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನೀತಿಗಳನ್ನು ರೂಪಿಸಬೇಕೆಂದು ಸಂಘಟನೆ ಒತ್ತಾಯಿಸಿದೆ. ಈ ಸಮುದಾಯಗಳ ಸದಸ್ಯರು ನೀತಿ ನಿರೂಪಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತನ್ನ 21 ಬೇಡಿಕೆಗಳಲ್ಲಿ ಪ್ರಸ್ತಾಪಿಸಿದೆ.
ಸ್ವಯಂ ಉದ್ಯೋಗಕ್ಕಾಗಿ 10 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಬೇಕು. ನಿರಾಸಕ್ತಿ ಅಥವಾ ತಾರತಮ್ಯವನ್ನು ತೋರಿಸುವ ಅಧಿಕಾರಿಗಳಿಗೆ ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ಕಠಿಣ ದಂಡವನ್ನು ಜಾರಿಗೆ ತರುವಂತೆಯೂ ಸಂಘಟನೆ ಕರೆ ನೀಡಿದೆ.
ಲೈಂಗಿಕ ಕಾರ್ಯಕರ್ತೆಯರನ್ನು ಬೆಂಬಲಿಸುವ ಸರ್ಕಾರೇತರ ಸಂಸ್ಥೆ ಸಾಧನಾ ಮಹಿಳಾ ಸಂಘದ ಕಾರ್ಯದರ್ಶಿ ಗೀತಾ ಮಾತನಾಡಿ "ಶಿಕ್ಷಣ, ಆರೋಗ್ಯ ರಕ್ಷಣೆ, ಮತದಾರರ ಗುರುತಿನ ಚೀಟಿ ಮತ್ತು ಉದ್ಯೋಗ ಮೀಸಲಾತಿಯಂತಹ ಗುರುತಿನ ಆಧಾರಿತ ಸೇವೆಗಳನ್ನು ಪಡೆಯುವುದು ಕೇವಲ ತಾಯಿಯ ದಾಖಲೆಗಳನ್ನು ಆಧರಿಸಿರಬೇಕು" ಎಂದು ಹೇಳಿದರು.
ಅಂಚಿನಲ್ಲಿರುವ ಸಮುದಾಯಗಳ ಮಕ್ಕಳ ವಿಷಯದಲ್ಲಿ ತಾಯಂದಿರು ಮತ್ತು ಮಕ್ಕಳ ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಈ ಬೇಡಿಕೆಗಳು ಹೊಂದಿವೆ ಎಂದು ಅವರು ಹೇಳಿದರು.
ನನ್ನ ಮದುವೆಯನ್ನು ವಿಶೇಷ ವಿವಾಹ ಕಾಯ್ದೆಯಡಿ ನೋಂದಾಯಿಸಲಾಗಿದ್ದರೂ, ನನ್ನ ವಿಚ್ಛೇದನದ ನಂತರ, ನನ್ನ ಮಗುವಿನ ಏಕೈಕ ಕಸ್ಟಡಿಯನ್ನು ನನಗೆ ನೀಡಲಾಯಿತು. ಆದರೂ, ನಾನು ಪಾಸ್‌ಪೋರ್ಟ್ ಕಚೇರಿಯನ್ನು ಸಂಪರ್ಕಿಸಿದಾಗ, ಅಸಡ್ಡೆ ಮತ್ತು ಪಕ್ಷಪಾತಿ ಅಧಿಕಾರಿಗಳನ್ನು ನಾನು ಎದುರಿಸಿದೆ ಎಂದು ಲೈಂಗಿಕ ಅಲ್ಪ ಸಂಖ್ಯಾತರ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ