
ಬೆಂಗಳೂರು: ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿರುವ ತಮಿಳು ನಟ ಕಮಲ್ ಹಾಸನ್ ಮೇ 30 ರೊಳಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ಮುಂದಿನ 'ಥಗ್ ಲೈಫ್' ಚಿತ್ರ ರಿಲೀಸ್ ಗೆ ಅವಕಾಶ ನೀಡದಿರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ತೀರ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸಿನಿಮಾ ವಿತರಕ ಕಮಲಾಕರ್ ಅವರ ನೇತೃತ್ವದಲ್ಲಿಂದು ಸಭೆ ನಡೆಸಲಾಯಿತು. ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು, ಥಾಮಸ್ ಡಿಸೋಜಾ, ಪ್ರದರ್ಶಕ ವಲಯದ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ನಿರ್ಮಾಪಕರು ಭಾಗಿಯಾಗಿದ್ದರು. ಸಭೆ ನಡೆಯುತ್ತಿದ್ದಾಗಲೇ ಕೆಲ ಕನ್ನಡಪರ ಹೋರಾಟಗಾರರು ಮುತ್ತಿಗೆಗೆ ಯತ್ನಿಸಿದ ಘಟನೆಯೂ ನಡೆಯಿತು.
ಸಭೆಯಲ್ಲಿ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ರಾಜ್ಯದಲ್ಲಿ ಕಮಲ್ ಹಾಸನ್ ಸಿನಿಮಾ ಬ್ಯಾನ್ ಮಾಡ್ಬೇಕು ಎಂದು ಹಲವು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿದ್ದಾರೆ. ಹಾಗಾಗಿ ಈ ವಿಚಾರದ ಬಗ್ಗೆ ಚರ್ಚಿಸಿದ್ದು, ಕಮಲ್ ಹಾಸನ್ ಕ್ಷಮೆಯಾಚಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಅವರು ಹೇಳಿರುವುದರಲ್ಲಿ ತಪ್ಪಿದ್ದು, ಕಮಲ್ ಹಾಸನ್ ರ ತಪ್ಪನ್ನ ಮನವರಿಕೆ ಮಾಡಿಸಿ ಕ್ಷಮೆ ಕೇಳಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಕಮಲ್ ಹಾಸನ್ ಬಗ್ಗೆ ಕನಿಕರ ಇಲ್ಲ:
ನಿರ್ಮಾಪಕ ಸಾರಾ ಗೋವಿಂದು, ಕಮಲ್ ಹಾಸನ್ ಬಗ್ಗೆ ನಮಗೆ ಯಾರಿಗೂ ಕನಿಕರ ಇಲ್ಲ. ಇವತ್ತು ಅಥವಾ ನಾಳೆ ಒಳಗೆ ಕಮಲ್ ಹಾಸನ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಖಂಡಿಸುತ್ತೇವೆ. ಕಮಲ್ ಹಾಸನ್ ಬಹಿರಂಗವಾಗಿ ಕ್ಷಮೆ ಕೇಳದೇ ಇದ್ದರೆ ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಮಾಡಿಕೊಡಲ್ಲ ಎಂದು ಎಚ್ಚರಿಕೆ ನೀಡಿದರು.
ಕ್ಷಮೆ ಕೇಳುವುದು ಕಮಲ್ ಹಾಸನ್ ರ ನೈತಿಕ ಹೊಣೆ: ಹಿರಿಯ ನಟಿ ಜಯಮಾಲಾ ಮಾತನಾಡಿ, ಭಾಷೆಯೊಂದರ ವಿವಾದದ ವಿಷಯ ಬಂದಾಗ ಎಲ್ಲಾ ಕನ್ನಡಿಗರು ಒಗ್ಗಟ್ಟಾಗಬೇಕು. ಅದು ನಮ್ಮ ಕರ್ತವ್ಯ. ಕಮಲ್ ಹಾಸನ್ ಗೊತ್ತಿದ್ದು, ಅಥವಾ ಗೊತ್ತಿಲ್ಲದೇ ಮಾತನಾಡಿದ್ದರೂ ಅವರ ಹೇಳಿಕೆ ತಪ್ಪು. ಕನ್ನಡ ತಮಿಳಿನಿಂದ ಹುಟ್ಟಿಲ್ಲ. ಅದನ್ನು ಸಮರ್ಥಿಸಿಕೊಳ್ಳುವ ಬದಲು ಕ್ಷಮೆಯಾಚಿಸಿದ್ರೆ ತಪ್ಪಿಲ್ಲ. ನಾವು ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತೇವೆ. ಅವರ ಮಾತಿನಿಂದ ಕನ್ನಡಿಗರಿಗೆ ನೋವಾಗಿರುವುದನ್ನು ಅವರಿಗೆ ಅರ್ಥ ಮಾಡಿಸಲು ನೆರವಾಗುತ್ತೇವೆ. ಕ್ಷಮೆ ಕೇಳುವುದು ಅವರ ನೈತಿಕ ಹೊಣೆ ಎಂದರು.
Advertisement