ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ 32 ವರ್ಷದ ಮುಸ್ಲಿಂ ವ್ಯಕ್ತಿಯ ಹತ್ಯೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಅವರಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮುಲಾಜಿಲ್ಲದೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಈ ಹತ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಮತ್ತು ಅಂತಹ ಕೋಮು ಚಟುವಟಿಕೆಗಳು ಹಾಗೂ ಕೊಲೆಗಳನ್ನು ನಿಗ್ರಹಿಸುವವರೆಗೆ ತಾವು ವಿಶ್ರಾಂತಿ ಪಡೆಯುವುದಿಲ್ಲ ತಕ್ಷಣ ಜಾರಿಗೆ ಬರುವಂತೆ ಕೋಮು ವಿರೋಧಿ ಪಡೆ ರಚಿಸುವ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಕೋಮು ಚಟುವಟಿಕೆಗಳು ನಡೆಯುವ ಇತರ ಸ್ಥಳಗಳನ್ನು ಒಳಗೊಂಡ ಕರಾವಳಿ ಪ್ರದೇಶವನ್ನು "ಸೂಕ್ಷ್ಮ" ಎಂದು ಪರಿಗಣಿಸಲಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಇನ್ನು ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಸರ್ಕಾರ ಕೋಮು ಹಿಂಸಾಚಾರ ತಡೆಯುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಹುದ್ದೆಗಳಿಗೆ ಮುಸ್ಲಿಮ್ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ತನ್ನ ಇಲಾಖೆಯ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿರುವುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಿಟ್ಟಾಗಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ತಮ್ಮ ಅನುಮತಿ ಇಲ್ಲದೆ ಲೋಕೋಪಯೋಗಿ ಇಲಾಖೆಯಿಂದ ಜಲಸಂಪನ್ಮೂಲ ಇಲಾಖೆಗೆ ಮುಖ್ಯ ಎಂಜಿನಿಯರ್‌ಗಳನ್ನು ವರ್ಗಾವಣೆ ಮಾಡಿ, ಸ್ಥಳ ನಿಯುಕ್ತಿ ಅಧಿಸೂಚನೆ ಹೊರಡಿಸಿರುವ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಪತ್ರದಲ್ಲಿ ಡಿಸಿಎಂ ಬರೆದಿದ್ದಾರೆ. ತನ್ನ ಅಧೀನದಲ್ಲಿರುವ ಇಲಾಖೆಯಲ್ಲಿ ಖಾಲಿ ಇರುವ ಈ ಕೆಲವು ವಿಭಾಗಗಳ ‘ಮುಖ್ಯಸ್ಥ’ರ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸುವ ಸಂದರ್ಭದಲ್ಲಿ ಗಮನಕ್ಕೆ ತಾರದ ಡಿಪಿಎಆರ್‌ನ ಕ್ರಮಕ್ಕೆ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, "ಇವು ಕೇವಲ ಸೂಚನೆಗಳು ಮಾತ್ರ. ರಾಜ್ಯ ರಾಜಕೀಯದಲ್ಲಿ ಪ್ರಮುಖ ಬದಲಾವಣೆಗಳು ಶೀಘ್ರದಲ್ಲೇ ನಡೆಯಲಿದೆ. ಸಿದ್ದರಾಮಯ್ಯ ಎಂಎಲ್‌ಸಿ ಬಿ ಕೆ ಹರಿಪ್ರಸಾದ್ ಅವರ ನಿವಾಸಕ್ಕೆ ನೀಡಿದ ಭೇಟಿಯನ್ನು ರಾಜ್ಯದಲ್ಲಿನ "ಬದಲಾಗುತ್ತಿರುವ ರಾಜಕೀಯ ಸಮೀಕರಣ ಎಂದು ಹೇಳಿದ್ದಾರೆ.
ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಎಂಬ ಹೇಳಿಕೆ ನೀಡಿರುವ ಕಮಲ್ ಹಾಸನ್ ವಿರುದ್ಧ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗತೊಡಗಿದೆ. ಕಮಲ್ ಹಾಸನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದ್ದು, ನಾನು ಪ್ರೀತಿಯಿಂದ ಹೇಳಿದ್ದೇನೆ. 'ಥಗ್ ಲೈಫ್' ಬ್ಯಾನ್ ಕುರಿತ ಕರೆಗೆ ಪ್ರತಿಕ್ರಿಯಿಸಿದ ಕಮಲ್ ಹಾಸನ್, ಕರ್ನಾಟಕದ ಜನರು ನನ್ನನ್ನು ಮತ್ತು ನನ್ನ ಸಿನಿಮಾ ನೋಡಿಕೊಳ್ಳುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದರು. ಇನ್ನು ಕಮಲ್ ಹಾಸನ್ ಕ್ಷಮೆ ಕೇಳುವ ತನಕ ರಾಜ್ಯದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅವಕಾಶವಿಲ್ಲ. ‘ಹಂಚಿಕೆದಾರರು ಕೂಡ ನಮ್ಮ ಜೊತೆ ಇದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು. ಕ್ಷಮೆ ಕೇಳದ ಹೊರತು ಅವರು ಕರ್ನಾಟಕದಲ್ಲಿ ಹೇಗೆ ಸಿನಿಮಾದ ವ್ಯಾಪಾರ ಮಾಡುತ್ತಾರೆ ಎಂಬುದನ್ನು ನಾವು ನೋಡುತ್ತೇವೆ ಕರ್ನಾಟಕ ಚಲನಚಿತ್ರ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಹೇಳಿದ್ದಾರೆ.
2022ರಲ್ಲಿ ಹಳೇ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣ ಸೇರಿದಂತೆ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. 43 ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಗಿರೀಶ್ ಭಾರದ್ವಾಜ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸಿಜೆ ಎನ್.ವಿ.ಅಂಜಾರಿಯಾ, ನ್ಯಾ.ಕೆ.ವಿ.ಅರವಿಂದ್ ಅವರಿದ್ದ ಹೈಕೋರ್ಟ್ ದ್ವಿಸದಸ್ಯ ಪೀಠ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ.
ಬೆಂಗಳೂರು ಅರಮನೆ ಮೈದಾನದ ಭೂವಿವಾದದಲ್ಲಿ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ನಲ್ಲಿ ತಾತ್ಕಾಲಿಕ ರಿಲೀಫ್ ದೊರೆತಿದ್ದು, 3400 ಕೋಟಿ ರೂ. ಟಿಡಿಆರ್ ಪಾವತಿಗೆ ತಡೆಯಾಜ್ಞೆ ನೀಡಲಾಗಿದೆ. ಸುಮಾರು 3,400 ಕೋಟಿ ರೂ. ಅಭಿವೃದ್ಧಿ ಹಕ್ಕು ಪ್ರಮಾಣಪತ್ರ ಅಥವಾ ಟಿಡಿಆರ್ ಸರ್ಟಿಫಿಕೇಟ್ ನ್ನು ರಾಜಮನೆತನಕ್ಕೆ ಹಸ್ತಾಂತರ ಮಾಡಬೇಕೆಂದು ಈ ಹಿಂದೆ ತಾನೇ ನೀಡಿದ್ದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಮರುಪರಿಶೀಲನಾ ಅರ್ಜಿಯ ಮುಂದಿನ ವಿಚಾರಣೆಯನ್ನು ಜುಲೈ 21ಕ್ಕೆ ಹಾಗೂ ಮುಖ್ಯ ಸಿವಿಲ್ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 18ಕ್ಕೆ ನಿಗದಿಪಡಿಸಿದೆ.
Advertisement