
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಅವರು ಸಿನಿಮಾ ಶೂಟಿಂಗ್‌ಗಾಗಿ ವಿದೇಶಕ್ಕೆ ಹೋಗಲು ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ಅನುಮತಿ ನೀಡಿದೆ.
ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಆದೇಶವನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಕೋರ್ಟ್, ಜುಲೈ 1 ರಿಂದ ಜುಲೈ 27 ರವರೆಗೆ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶ ಪ್ರವಾಸ ಮಾಡಲು ಅನುಮತಿ ನೀಡಿದೆ.
ಪ್ರಸ್ತುತ ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಿರುವ ದರ್ಶನ್, ದುಬೈ ಮತ್ತು ಯುರೋಪ್‌ಗೆ ಪ್ರಯಾಣಿಸಲು ಅನುಮತಿ ಕೋರಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 439(1)(ಬಿ) ಅಡಿಯಲ್ಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ವಿಶೇಷ ಸರ್ಕಾರಿ ಅಭಿಯೋಜಕರು, ನಟ ಅರ್ಜಿಯನ್ನು ಬಲವಾಗಿ ವಿರೋಧಿಸಿದ್ದರು. ದರ್ಶನ್ ದೇಶವನ್ನು ಬಿಡಲು ಅನುಮತಿ ನೀಡಿದರೆ, ಅವರು ವಾಪಸ್ ಬರದಿರಬಹುದು ಮತ್ತು ವಿಚಾರಣೆಯ ಪ್ರಕ್ರಿಯೆಯ ಹಳಿತಪ್ಪಿಸಬಹುದು ಎಂದು ವಾದಿಸಿದ್ದರು.
ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ದರ್ಶನ್ ತಮ್ಮ ಮುಂಬರುವ ಚಿತ್ರ ಡೆವಿಲ್‌ನ ಚಿತ್ರೀಕರಣವನ್ನು ಪುನರಾರಂಭಿಸಿದ್ದು, ವಿದೇಶದಲ್ಲಿ ಸಹ ‘ಡೆವಿಲ್: ದಿ ಹೀರೋ’ ಸಿನಿಮಾದ ಚಿತ್ರೀಕರಣ ನಡೆಯಬೇಕಿದೆ. ಹೀಗಾಗಿ ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ದರ್ಶನ್ ಅರ್ಜಿ ಸಲ್ಲಿಸಿದ್ದರು.
33 ವರ್ಷದ ದರ್ಶನ್ ಅಭಿಮಾನಿ ರೇಣುಕಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ ಆರೋಪದ ಮೇಲೆ ನಟ ದರ್ಶನ್, ಪವಿತ್ರಾ ಮತ್ತು ಇತರರನ್ನು ಜೂನ್ 11, 2024 ರಂದು ಬಂಧಿಸಲಾಗಿತ್ತು.
Advertisement