
ಬೆಂಗಳೂರು: ಮಕ್ಕಳ ತೀವ್ರ ಅಪೌಷ್ಟಿಕ ಪ್ರಮಾಣವನ್ನು ಪ್ರತಿ ವರ್ಷ ಕನಿಷ್ಠ ಶೇ.1 ರಷ್ಟು ಕಡಿಮೆ ಮಾಡಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಕ್ಕಳ ಅಪೌಷ್ಟಿಕತೆಯನ್ನು ಉಲ್ಲೇಖಿಸಿದ ಸಿಎಂ, ಸಾಮಾಜಿಕ ಸವಾಲುಗಳಿಂದಾಗಿ ಸಮಸ್ಯೆಯನ್ನು ರಾತ್ರೋರಾತ್ರಿ ತೊಡೆದುಹಾಕಲು ಸಾಧ್ಯವಾಗದಿದ್ದರೂ, ಜಿಲ್ಲೆಗಳು ಪ್ರತಿ ವರ್ಷ ಅಪೌಷ್ಟಿಕತೆ ಪ್ರಮಾಣವನ್ನು ಕನಿಷ್ಠ ಶೇ.1 ರಷ್ಟು ಕಡಿಮೆ ಮಾಡಲು ಕ್ರಮ ವಹಿಸಬೇಕು ಎಂದು ಹೇಳಿದರು.
"ಈ ಸಮಸ್ಯೆಯನ್ನು ಒಂದೇ ಬಾರಿಗೆ ತೊಡೆದುಹಾಕಲು ಸಾಧ್ಯವಾಗದಿರಲು ಸಾಮಾಜಿಕ ಕಾರಣಗಳಿವೆ. ಆದ್ದರಿಂದ, ಪ್ರತಿ ವರ್ಷ ಶೇ.1 ರಷ್ಟು ಕಡಿಮೆ ಮಾಡುವುದು ಸಹಾಯ ಮಾಡುತ್ತದೆ" ಎಂದು ವಿಶೇಷವಾಗಿ ಬೀದರ್, ವಿಜಯನಗರ ಮತ್ತು ಬಳ್ಳಾರಿಯ ಜಿಲ್ಲಾಧಿಕಾರಿಗಳಿಗೆ ಸಿಎಂ ನಿರ್ದೇಶನವನ್ನು ನೀಡಿದರು.
ಹಿಮೋಗ್ಲೋಬಿನ್ ಮಟ್ಟವನ್ನು ಪತ್ತೆಹಚ್ಚುವುದು ಸೇರಿದಂತೆ ಮಕ್ಕಳ ನಿರಂತರ ಆರೋಗ್ಯ ಮೇಲ್ವಿಚಾರಣೆ ನಡೆಸಬೇಕು. ವಿಜಯನಗರ ಜಿಲ್ಲೆಯಲ್ಲಿ ಅಪೌಷ್ಟಿಕತೆ ಮಟ್ಟ ಶೇಕಡ 5.53 ರಷ್ಟಿದೆ. ಬೀದರ್ ನಲ್ಲಿ ಶೇ.5.6 ರಷ್ಟಿದ್ದರೆ , ಬಳ್ಳಾರಿ ಜಿಲ್ಲೆಯಲ್ಲಿ ಶೇ.4.39 ರಷ್ಟಿದೆ. ಮಕ್ಕಳ ಪೌಷ್ಠಿಕತೆಗಾಗಿ ಶಾಲೆಗಳಲ್ಲಿ ಒದಗಿಸಲಾಗುವ ಹಾಲು, ಮೊಟ್ಟೆ ಸಮರ್ಪಕವಾಗಿ ನೀಡಲಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಪದೇ ಪದೇ ನೆಪ ಹೇಳುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಧಾನ ವ್ಯಕ್ತಪಡಿಸಿದರು.
"ನೀವು ಎಷ್ಟು ವರ್ಷಗಳ ಕಾಲ ಒಂದೇ ಕಥೆಯನ್ನು ಹೇಳುತ್ತೀರಿ?" ಎಂದು ಸಿಎಂ ಕಠಿಣ ಧ್ವನಿಯಲ್ಲಿ ಪ್ರಶ್ನಿಸಿದರು ಮತ್ತು ಅಗತ್ಯವಿದ್ದರೆ, ಭೂಸ್ವಾಧೀನವನ್ನು ನಿರ್ವಹಿಸಲು ಪ್ರತ್ಯೇಕವಾಗಿ ವಿಶೇಷ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಹೇಳಿದರು.
ಬಾಕಿ ಉಳಿದಿರುವ ಹೆದ್ದಾರಿ ಯೋಜನೆಗಳನ್ನು ಪೂರ್ಣಗೊಳಿಸದ ಹೊರತು ಹೊಸ ಹೆದ್ದಾರಿ ಯೋಜನೆಗಳನ್ನು ಅನುಮೋದಿಸಲಾಗುವುದಿಲ್ಲ ಎಂದು ಸಿಎಂ ಎಚ್ಚರಿಸಿದರು.
ಈ ವೇಳೆ ಬಾಕಿ ಇರುವ 42 ಯೋಜನೆಗಳಲ್ಲಿ 22 ಪೂರ್ಣಗೊಂಡಿವೆ. ಆದರೆ ಅನೇಕ ಸಮಸ್ಯೆಗಳು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿವೆ ಎಂದು ಹೇಳುವ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯವರ ಅಭಿಪ್ರಾಯವನ್ನು ಬೆಂಬಲಿಸಿದರು. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಂದ್ರ ಅಧಿಕಾರಿಗಳು ಹೆಚ್ಚು ಸಕ್ರಿಯರಾಗಿರಬೇಕು ಎಂದು ಅವರು ಒತ್ತಾಯಿಸಿದರು.
SSLCಯಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಬಂದ ಜಿಲ್ಲೆಗಳ ಡಿಡಿಪಿಐಗಳಿಗೆ ನೋಟಿಸ್
ಎಸೆಸೆಲ್ಸಿಯಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಜಿಲ್ಲೆಗಳ ಡಿಡಿಪಿಐಗಳಿಗೆ ನೋಟಿಸ್ ನೀಡಬೇಕು, ನೋಟಿಸ್‌ಗೆ ಕೊಟ್ಟ ಉತ್ತರ ಸಮರ್ಪಕ ಅನ್ನಿಸದಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದರು.
ಎಸೆಸೆಲ್ಸಿಯಲ್ಲಿ ಫಲಿತಾಂಶ ಕಡಿಮೆ ಬರುವುದಕ್ಕೆ ಶಿಕ್ಷಕರ ಕೊರತೆ, ಸಿಬ್ಬಂದಿ ಕೊರತೆ ಎನ್ನುವ ನೆಪ ಹೇಳಬೇಡಿ. ದಕ್ಷಿಣ ಕನ್ನಡ ಮತ್ತು ಇತರೆ ಜಿಲ್ಲೆಗಳಲ್ಲಿ ಮಾತ್ರ ಉತ್ತಮ ಫಲಿತಾಂಶ ಬರುತ್ತಿದೆ. ಡಿಡಿಪಿಐಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ಡಿಸಿಪಿಐಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶಿಕ್ಷಕರು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದನ್ನು ಪರಿಶೀಲನೆ ನಡೆಸಬೇಕು. ಶಿಕ್ಷಕರು ಮತ್ತು ಡಿಡಿಪಿಐಗಳು ಆಸಕ್ತಿಯಿಂದ ಕೆಲಸ ಮಾಡಿದರೆ, ಉತ್ತಮ ಫಲಿತಾಂಶ ಎಲ್ಲಾ ಕಡೆ ಬರುತ್ತದೆ ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
Advertisement