
ತುಮಕೂರು: ತುಮಕೂರು ಜಿಲ್ಲೆಯ ಗುಬ್ಬಿ ಬಳಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕಾಲುವೆ ಯೋಜನೆ ವಿರೋಧಿಸಿ ರೈತ ಸಂಘಟನೆಗಳು, ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದವು. ನಂತರ ಜಿಲ್ಲಾಡಳಿತ ಯೋಜನಾ ಕಾರ್ಯವನ್ನು ಸ್ಥಗಿತಗೊಳಿಸುವುದಾಗಿ ಭರವಸೆ ನೀಡಿದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.
ಪ್ರತಿಭಟನೆಯಲ್ಲಿ ಶಾಸಕರಾದ ಬಿ ಸುರೇಶ್ ಗೌಡ, ಜಿ ಬಿ ಜ್ಯೋತಿ ಗಣೇಶ್ ಮತ್ತು ಎಂ ಟಿ ಕೃಷ್ಣಪ್ಪ ಅವರು ಭಾಗವಹಿಸಿದ್ದರು. ಅಲ್ಲದೆ ವಿವಿಧ ಧಾರ್ಮಿಕ ಮಠಗಳ ಮಠಾಧೀಶರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಸ್ಥಳದಲ್ಲಿ ಭಾರೀ ಪೊಲೀಸ್ ನಿಯೋಜನೆ ಮಾಡಲಾಗಿತ್ತು.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ರಸ್ತೆಗಳಲ್ಲಿ ಕುಳಿತು ಸಂಚಾರಕ್ಕೆ ಅಡ್ಡಿಪಡಿಸಿದರು. ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಸಾರ್ವಜನಿಕ ವಿರೋಧದ ಹೊರತಾಗಿಯೂ ಹೇಮಾವತಿ ಕಾಲುವೆಯ ನೀರನ್ನು ನೆರೆಯ ಬೆಂಗಳೂರು ದಕ್ಷಿಣ ಜಿಲ್ಲೆಗೆ(ರಾಮನಗರ) ತಿರುಗಿಸುವ ಸರ್ಕಾರದ ಯೋಜನೆ "ಅವೈಜ್ಞಾನಿಕ" ಎಂದು ಕಿಡಿ ಕಾರಿದರು.
ಈ ಯೋಜನೆಯು ತುಮಕೂರು ಜಿಲ್ಲೆಯ ಹಲವಾರು ತಾಲ್ಲೂಕುಗಳಿಗೆ ಹಾನಿಕಾರಕವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಹೋರಾಟ ಸಮಿತಿ ಇಂದು ಬೃಹತ್ ಹೋರಾಟಕ್ಕೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಗುಬ್ಬಿ ತಹಶೀಲ್ದಾರ್ ಬಿ.ಆರತಿ ಅವರು ಇಂದು ಮತ್ತು ನಾಳೆ ಬೆಳಗ್ಗೆ 6 ಗಂಟೆಯವರೆಗೆ ಕೆಲಸ ನಡೆಯುತ್ತಿರುವ ಸ್ಥಳದ 10 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿದ್ದರು.
ಸಮಸ್ಯೆ ಬಗೆಹರಿಸುವಂತೆ ಪರಮೇಶ್ವರಗೆ ಸಿಎಂ ಸೂಚನೆ
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ಅವರೊಂದಿಗೆ ಮಾತನಾಡಿದ್ದು, ಸಮಸ್ಯೆಯನ್ನು ಪರಿಹರಿಸುವಂತೆ ಸೂಚಿಸಿರುವುದಾಗಿ ಹೇಳಿದರು.
ಹೇಮಾವತಿ ನದಿ ಕೆನಾಲ್ ಯೋಜನೆಗೆ ಅಡ್ಡಿಪಡಿಸುವ ಕೆಲಸ ಆಗಬಾರದು. ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹಸಚಿವರು ಬಗೆಹರಿಸಲು ಸೂಚನೆ ನೀಡಿರುವುದಾಗಿ ಸಿಎಂ ತಿಳಿಸಿದರು.
ಪ್ರತಿಭಟನೆ ಕೇವಲ ರಾಜಕೀಯ
"ಸರ್ಕಾರವು ಕಾಲುವೆ ನಿರ್ಮಾಣದ ಬಗ್ಗೆ ನಿರ್ಧರಿಸಿ ಸುಮಾರು 1,000 ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ನೀಡಿದೆ. ಮೂರು ತಿಂಗಳ ಹಿಂದೆ ನಾವು ಕಾಮಗಾರಿಯನ್ನು ಪ್ರಾರಂಭಿಸಲು ಪ್ರಯತ್ನಿಸಿದಾಗ, ಬಿಜೆಪಿ ಅದನ್ನು ಅವೈಜ್ಞಾನಿಕ ಎಂದು ವಿರೋಧಿಸಿತು. ನಂತರ ನೀರಾವರಿ ಸಚಿವ ಮತ್ತು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಹಾಜರಿದ್ದರು. ನಿರ್ಧಾರ ತೆಗೆದುಕೊಳ್ಳುವ ಮೊದಲು ತಾಂತ್ರಿಕ ಸಮಿತಿ ರಚಿಸಿ ಕಾರ್ಯಸಾಧ್ಯತೆಯ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯಲು ಸಭೆಯಲ್ಲಿ ನಿರ್ಧರಿಸಲಾಯಿತು" ಎಂದು ಗೃಹ ಸಚಿವ ಪರಮೇಶ್ವರ ಅವರು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಯೋಜನೆಗೆ ಅನುಮೋದನೆ ನೀಡಿದ ತಾಂತ್ರಿಕ ಸಮಿತಿಯ ವರದಿಯ ಆಧಾರದ ಮೇಲೆ, ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಅವರು ಮತ್ತೆ ಕಾಮಗಾರಿಯನ್ನು ನಿಲ್ಲಿಸಲು ಪ್ರತಿಭಟಿಸುತ್ತಿದ್ದಾರೆ. ಇದು ಕೇವಲ ರಾಜಕೀಯ. ನಾವು ಅವರೊಂದಿಗೆ ಮಾತನಾಡಿ ಮುಂದುವರಿಯುತ್ತೇವೆ" ಎಂದು ಹೇಳಿದರು.
ಇದು ತುಮಕೂರಿನ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ಉಪಮುಖ್ಯಮಂತ್ರಿ ಭರವಸೆ ನೀಡಿದ್ದರೂ, ಅವರು ಪ್ರತಿಭಟಿಸಿದರೆ ಅವರ ಉದ್ದೇಶ ಏನೆಂದು ಅರ್ಥಮಾಡಿಕೊಳ್ಳಬೇಕು ಎಂದು ಪರಮೇಶ್ವರ ಹೇಳಿದರು.
ಇನ್ನುಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವರಕುಮಾರ್ ಅವರು, ಕೃಷ್ಣಪ್ಪ ಮತ್ತು ಸುರೇಶ್ ಗೌಡ ಸೇರಿದಂತೆ ಎಲ್ಲಾ ಶಾಸಕರಿಗೂ ವಾಸ್ತವದ ಬಗ್ಗೆ ಗೊತ್ತಿದೆ. ಆದರೂ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ.
"ಅಲ್ಲಿನ ಜನರು ಸಹ ನಮ್ಮವರೇ, ನಾವು ಎಲ್ಲರ ಹಿತಾಸಕ್ತಿಯನ್ನು ಕಾಪಾಡುತ್ತೇವೆ" ಎಂದು ಹೇಳಿದರು.
Advertisement