

ಬೆಂಗಳೂರು: ಕೇಂದ್ರ ಸರ್ಕಾರ ಕನ್ನಡ ಭಾಷೆಯನ್ನು "ನಿರ್ಲಕ್ಷಿಸುತ್ತಿದೆ" ಮತ್ತು ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಆರೋಪಿಸಿದ್ದಾರೆ.
ಇಂದು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ, "ಕನ್ನಡ ವಿರೋಧಿ" ಗಳನ್ನು ತಿರಸ್ಕರಿಸುವಂತೆ ರಾಜ್ಯದ ಜನತೆಗೆ ಕರೆ ನೀಡಿದರು.
ಕೇಂದ್ರ ಸರ್ಕಾರ, ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯವು ಕೇಂದ್ರಕ್ಕೆ 4.5 ಲಕ್ಷ ಕೋಟಿ ರೂಪಾಯಿ ಆದಾಯವನ್ನು ಒದಗಿಸುತ್ತಿದೆ. ಆದರೆ ನಮಗೆ ನ್ಯಾಯಯುತ ಪಾಲನ್ನು ನಿರಾಕರಿಸಲಾಗಿದೆ ಮತ್ತು ಅದಕ್ಕೆ ಪ್ರತಿಯಾಗಿ ಅಲ್ಪ ಮೊತ್ತವನ್ನು ನೀಡಲಾಗುತ್ತದೆ ಎಂದು ಸಿಎಂ ಆರೋಪಿಸಿದರು.
15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ 70 ಸಾವಿರ ಕೋಟಿ ರೂ. ಅನ್ಯಾಯ ಆಗಿದೆ. ಕೇಂದ್ರದಿಂದ ರಾಜ್ಯಕ್ಕೆ ಸುಮಾರು 1 ಲಕ್ಷ ಕೋಟಿ ರೂ. ಅನ್ಯಾಯ ಆಗಿದೆ ಎಂದರು.
ಕನ್ನಡ ಭಾಷೆಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ ಮುಖ್ಯಮಂತ್ರಿ, "ಹಿಂದಿಯನ್ನು ಹೇರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಹಿಂದಿ ಮತ್ತು ಸಂಸ್ಕೃತದ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ. ಆದರೆ ದೇಶದ ಇತರ ಭಾಷೆಗಳನ್ನು ನಿರ್ಲಕ್ಷಿಸಲಾಗುತ್ತಿದೆ" ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದ ಮದರಾಸಗಳಲ್ಲೂ ಕನ್ನಡ ಕಲಿಕೆ
ರಾಜ್ಯದ ಮದರಾಸಗಳಲ್ಲಿ ವಾರದಲ್ಲಿ ಎರಡು ದಿನ ಕನ್ನಡ ಕಲಿಕೆ ಆರಂಭಿಸಲಾಗಿದೆ. ಕನ್ನಡ ಭಾಷೆ, ನೆಲ, ಜಲವನ್ನು ಸಂರಕ್ಷಿಸಿಕೊಂಡು ಹೋಗುವ ಕೆಲಸ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಲಾವಿದರ ಮಾಸಾಶನ 2,000 ರೂ.ನಿಂದ 2,500 ರೂ.ಗೆ ಹೆಚ್ಚಳ ಮಾಡಿದ್ದೇವೆ. ಕರ್ನಾಟಕದಲ್ಲಿ ತಯಾರಾಗುವ ಮತ್ತು ಮಾರಾಟವಾಗುವ ಉತ್ಪನ್ನಗಳ ಮೇಲೆ ಕನ್ನಡ ಬಳಕೆ ಕಡ್ಡಾಯಗೊಳಿಸಿದ್ದೇವೆ. ಕನ್ನಡ ಭಾಷೆ ಮತ್ತು ಕನ್ನಡಿಗರ ಹಿತವೇ ನಮ್ಮ ಮೊದಲ ಆದ್ಯತೆ ಎಂದು ಸಿಎಂ ತಿಳಿಸಿದರು.
ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರು ನಾಮಕರಣಗೊಂಡು 2023ಕ್ಕೆ 50 ವರ್ಷ ತುಂಬಿದರೂ ಆಗಿನ ಸರ್ಕಾರ ಸುವರ್ಣಮಹೋತ್ಸವವನ್ನು ಕೈಬಿಟ್ಟಿತ್ತು. ಆದರೆ ನಾವು ಅಧಿಕಾರಕ್ಕೆ ಬಂದು ಒಂದು ವರ್ಷ ತಡವಾದರೂ ಕರ್ನಾಟಕದ ಸುವರ್ಣ ಮಹೋತ್ಸವವನ್ನು ಆರಂಭಿಸಿ, ಇಡೀ ವರ್ಷ ಆಚರಿಸಿದ್ದೇವೆ. "ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ" ಎನ್ನುವುದು ಈ ಕಾರ್ಯಕ್ರಮದ ಘೋಷವಾಕ್ಯ. ಕನ್ನಡ ಭಾಷೆ, ಸಂಸ್ಕೃತಿ ವಿಚಾರದಲ್ಲಿ ಇದು ನಮ್ಮ ಬದ್ಧತೆ ಎಂದರು.
Advertisement