
ನಗರದ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿ ಈ ಘಟನೆ ನಡೆದಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಭುವನೇಶ್ವರಿ ಮೂರ್ತಿ ಮೆರವಣಿಗೆ ಮಾಡುತ್ತಾ ಯುವಕರ ಗುಂಪು ನೃತ್ಯ ಮಾಡುತ್ತಿತ್ತು. ಏಕಾಏಕಿ ಗುಂಪಿಗೆ ನುಗ್ಗಿದ ಕೆಲವರು ಜನಸಂದಣಿಯಲ್ಲೇ ಚಾಕು ಹಾಗೂ ಜಂಬೆಗಳಿಂದ ಚುಚ್ಚಿದರು. ಯುವಕರು ನೆಲಕ್ಕೆ ಬಿದ್ದು ರಕ್ತಸ್ರಾವದಿಂದ ಒದ್ದಾಡುತ್ತಿದ್ದಂತೆಯೇ ಸ್ಥಳದಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೂಡಲೇ ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ.
ಬೆಂಗಳೂರು ಸುರಂಗ ರಸ್ತೆಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಇಂದು ಲಾಲ್‌ಬಾಗ್‌ನಲ್ಲಿ ಜನ ಜಾಗೃತಿ ಅಭಿಯಾನ ನಡೆಸಿತು. ಸಂಸದ ತೇಜಸ್ವಿಸೂರ್ಯ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಶಾಸಕರಾದ ಉದಯ ಗರುಡಾಚಾರ್, ಸಿ.ಕೆ.ರಾಮಮೂರ್ತಿ, ರವಿ ಸುಬ್ರಹ್ಮಣ್ಯ ಸೇರಿದಂತೆ ಹಲವು ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಲಾಲ್‌ಬಾಗ್‌ನ ವಾಯುವಿಹಾರಿಗಳು ಈ ಜನಜಾಗೃತಿ ಅಭಿಯಾನದಲ್ಲಿ ಭಾಗಿಯಾಗಿ ಬೆಂಗಳೂರು ಸುರಂಗ ರಸ್ತೆ ನಿರ್ಮಾಣವನ್ನು ಕೈಬಿಡುವಂತೆ ಆಗ್ರಹಿಸಿದರು. ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಸಂಸದ ತೇಜಸ್ವಿ ಸೂರ್ಯ ಈ ವಿಚಾರವಾಗಿ ಸಾರ್ವಜನಿಕರ ಜೊತೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಆರ್. ಅಶೋಕ್, ಈ ಯೋಜನೆಗೆ 120 ಡಿಪಾರ್ಟ್ಮೆಂಟ್ ಇಂದ ಅನುಮತಿ ಬೇಕು. ಆದರೆ ಒಬ್ಬರ ಅನುಮತಿಯನ್ನೂ ತೆಗೆದುಕೊಂಡಿಲ್ಲ. ಬಿಹಾರ, ತಮಿಳುನಾಡು ಎಲೆಕ್ಷನ್‌ಗಾಗಿ ಮತ್ತು ಹಣ ಲೂಟಿ ಮಾಡುವ ಉದ್ದೇಶದಿಂದ ಈ ಯೋಜನೆಗೆ ಕೈ ಹಾಕಲಾಗಿದೆ. ಬೆಂಗಳೂರಿನಲ್ಲಿರುವ ಎಲ್ಲಾ ಪಾರ್ಕ್, ಲೇಕ್ಗಳನ್ನು ಹುಡುಕುತ್ತಿದ್ದಾರೆ. ಇದು ಮನೆಹಾಳು ಕೆಲಸ ಅಲ್ವಾ? ಕೆಂಪೇಗೌಡರ ಆಶಯಕ್ಕೆ ಕೊಳ್ಳಿ ಇಡ್ತಿದ್ದಾರೆ. ಇದರ ವಿರುದ್ಧ ಜನಾಂದೋಲನ ಆಗ್ಬೇಕು. ಲಾಲ್ ಬಾಗ್ ಬೆಂಗಳೂರಿನ ಶ್ವಾಸಕೋಶ ಇದ್ದಹಾಗೆ. ಮೊದಲು ಬೆಂಗಳೂರಿನಲ್ಲಿರುವ ಗುಂಡಿ ಮುಚ್ಚಿ, ನಂತರ ಚಂದ್ರಲೋಕಕ್ಕೆ ಟನಲ್ ಮಾಡಿ ಎಂದು ವ್ಯಂಗ್ಯ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಟನಲ್ ಯೋಜನೆಯನ್ನು ನಾವು ಮೊದಲ ದಿನದಿಂದಲೂ ವಿರೋಧಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಶೇ.12 ರಷ್ಟು ಜನ ಮಾತ್ರ ಕಾರು ಉಪಯೋಗಿಸುತ್ತಾರೆ. ಈ ಶೇ.12 ರಷ್ಟು ಜನರು ಮಾತ್ರ ಉಪಯೋಗಿಸಬಹುದಾದಂತಹ, ತಿಂಗಳಿಗೆ 20000 ರೂ ಟೋಲ್ ಕಟ್ಟಿ ಉಪಯೋಗಿಸಬಹುದಾದಂತಹ ವಿಐಪಿ ಕಾರಿಡಾರ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಮಾಡಲು ಹೊರಟಿದೆ. ಈ ಟನಲ್ ರಸ್ತೆ ಶ್ರೀಮಂತರಿಗೋಸ್ಕರ ಮಾಡುತ್ತಿರುವ ಯೋಜನೆಯಾಗಿದೆ ಎಂದು ಹೇಳಿದ್ದಾರೆ. ಈ ಮಧ್ಯೆ ನಗರದಲ್ಲಿ ಸುರಂಗ ರಸ್ತೆ ವಿಚಾರವಾಗಿ ವಿಪಕ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿಯೇ ಸಮಿತಿ ರಚನೆ ಮಾಡಲು ಸಿದ್ಧ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ಎಲ್ಲರೂ ಕನ್ನಡ ಕಲಿಯಬೇಕು ಎಂಬ ಉದ್ದೇಶದಿಂದ ಎಲ್ಲ ಮದರಸ ಮತ್ತು ಉರ್ದು ಶಾಲೆಗಳಲ್ಲಿ ಕನ್ನಡ ಕಲಿಕೆ ಆರಂಭಿಸಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿಯಂತೆ ಮದರಸಗಳಲ್ಲಿ 90 ದಿನದಲ್ಲಿ ಕನ್ನಡ ಕಲಿಸುವ ಯೋಜನೆ ಆರಂಭವಾಗಿದೆ. ಉರ್ದು ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ, ಇಂಗ್ಲಿಷ್ ಭಾಷೆ ಕಲಿಸಲು ಆದೇಶಿಸಿದೆ’ ಎಂದರು.
ಆಟವಾಡಲು ಹೋಗಿ ಕಾಲು ಜಾರಿ ಬಿದ್ದ ಬಾಲಕಿ ರಕ್ಷಣೆಗೆ ಹೋದ ನಾಲ್ವರು ಮಕ್ಕಳು ನೀರುಪಾಲಾದ ದಾರುಣ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಬಾಲಕಿಯರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ. ಶಾಂತಿನಗರದ ಮದರಸದ ಮಕ್ಕಳನ್ನು ಪಿಕ್‌ನಿಕ್‌ಗೆ ಎಂದು ಕರೆದುಕೊಂಡು ಬರಲಾಗಿತ್ತು. ನಿನ್ನೆ ಸಂಜೆ 5.30ರ ಸಮಯಕ್ಕೆ ನಾಲೆ ಬಳಿ ಆಟವಾಡುವಾಗ ಮಕ್ಕಳು ನಾಲೆಗೆ ಇಳಿದಿದ್ದರು. ನೋಡ ನೋಡುತ್ತಿದ್ದಂತೆ ನಾಲ್ವರು ಮಕ್ಕಳು ಕೊಚ್ಚಿ ಹೋಗಿದ್ದರು. ಇದರಲ್ಲಿ ಆಯಿಷಾಳನ್ನ ಎಂಬ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ. ಇಂದು ಶೋಧ ಕಾರ್ಯ ಮುಂದುವರೆಯಲಿದೆ. ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Advertisement