

ಹಾವೇರಿ: ದೀಪಾವಳಿಯ ನಂತರ ಹಾವೇರಿ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಸಲಾಗುವ ಕೊಬ್ರಿ ಹೋರಿ ಬೆದರಿಸುವ ಸ್ಪರ್ಧೆಗೆ ಹಾವೇರಿ ಪೊಲೀಸರು ಕಟ್ಟು ನಿಟ್ಟಿನ ನಿಯಮಗಳನ್ನು ರೂಪಿಸಿದ್ದು, ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆಯೋಜಕರಿಗೆ ಸೂಚಿಸಿದ್ದಾರೆ.
ಹೋರಿ ಬೆದರಿಸುವ ಸ್ಪರ್ಧೆ ವೇಳೆ ಇತ್ತೀಚಿಗೆ ಅವಘಡಗಳು ಹೆಚ್ಚುತ್ತಿದ್ದು, ಹಲವರ ಸಾವಿಗೆ ಕಾರಣವಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ಹೋರಿ ತಿವಿದು ನಾಲ್ವರು ಸಾವನ್ನಪ್ಪಿದ್ದಾರೆ.
ಕೊಬ್ರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಜಲ್ಲಿಕಟ್ಟು ಸ್ಪರ್ಧೆಯಂತೆಯೇ, ಗೂಳಿಗಳು ಒಂದು ತುದಿಯಿಂದ ಇನ್ನೊಂದು ತುದಿಗೆ ಓಡುತ್ತವೆ. ಹೋರಿಗಳು ಓಟವನ್ನು ಪೂರ್ಣಗೊಳಿಸುವ ಮೊದಲು ಅವುಗಳನ್ನು ಹಿಡಿಯಬೇಕು. ಈ ಸಮಯದಲ್ಲಿ ಅನೇಕ ಯುವಕರು ಮತ್ತು ಪಕ್ಕದಲ್ಲಿ ಕುಳಿತವರಿಗೆ ಹೋರಿ ತಿವಿದು ಹಲವರು ಗಾಯಗೊಂಡಿದ್ದಾರೆ ಮತ್ತು ಕೆಲವರು ಸಾವನ್ನಪ್ಪಿದ್ದಾರೆ. ಅವಘಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು, ಈ ಸ್ಪರ್ಧೆಯನ್ನು ಆಯೋಜಿಸುವ ಪ್ರಮುಖರೊಂದಿಗೆ ಸಭೆ ನಡೆಸಿದರು.
ನಿಯಮಗಳ ಪ್ರಕಾರ, ಸ್ಥಳೀಯ ತಹಶೀಲ್ದಾರ್ ಕಚೇರಿಗೆ ಕೊಬ್ರಿ ಹೋರಿ ಬೆದರಿಸುವ ಸ್ಪರ್ಧೆ ಬಗ್ಗೆ ಎರಡು ವಾರಗಳ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರು ಈ ಕಾರ್ಯಕ್ರಮದ ಸಮಯದಲ್ಲಿ ಜನರ ಸುರಕ್ಷತೆ ಮತ್ತು ಭದ್ರತೆಗಾಗಿ ವ್ಯವಸ್ಥೆಗಳನ್ನು ಪರಿಶೀಲಿಸುತ್ತಾರೆ. ಈ ಸಂಬಂಧ ಪಶುಸಂಗೋಪನೆ ಮತ್ತು ಗೃಹ ಇಲಾಖೆಯು 2022 ರಲ್ಲಿ ವಿವರವಾದ ನಿಯಮಗಳನ್ನು ರೂಪಿಸಿತ್ತು ಮತ್ತು ಅದನ್ನು ಜಾರಿಗೆ ತರಲಾಗುತ್ತಿದೆ. ಪೊಲೀಸರು ಅಥವಾ ಸ್ಥಳ ಆಡಳಿತ ಈ ಕ್ರೀಡೆಗೆ ವಿರುದ್ಧವಾಗಿಲ್ಲ. ಆದರೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು" ಎಂದು ಅಧಿಕಾರಿ ಹೇಳಿದ್ದಾರೆ.
ಕೋಬ್ರಿ ಹೋರಿ ಬೆದರಿಸುವ ಸ್ಪರ್ಧೆ ದೀಪಾವಳಿ ಹಬ್ಬದ ನಂತರ ಪ್ರಾರಂಭವಾಗಿ ಯುಗಾದಿ ಹಬ್ಬದವರೆಗೆ ಮುಂದುವರಿಯುತ್ತವೆ. ಹಲವು ಬಾರಿ ಆಯೋಜಕರು ಪೊಲೀಸರಿಗೆ ಮಾಹಿತಿ ನೀಡುವುದಿಲ್ಲ ಮತ್ತು ಸಾವುಗಳು ಸಂಭವಿಸಿದಾಗ ಆಡಳಿತ ಮಂಡಳಿಯು ಘಟನೆಯ ಬಗ್ಗೆ ಗಮನ ಸೆಳೆಯುತ್ತದೆ.
"38 ಡಿಗ್ರಿಗಿಂತ ಹೆಚ್ಚಿನ ತಾಪಮಾನದಲ್ಲಿ ಹೋರಿಗಳು ಯಾವುದೇ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ. ಕಾರ್ಯಕ್ರಮದ ಸಮಯದಲ್ಲಿ ಅಥವಾ ಮೊದಲು ಹೋರಿಗಳಿಗೆ ಯಾವುದೇ ನಿದ್ರಾಜನಕ ಅಥವಾ ಮದ್ಯವನ್ನು ನೀಡಬಾರದು. ಹೋರಿಗಳ ಬೆನ್ನಿಗೆ ಮೆಣಸಿನ ಪುಡಿ ಲೇಪಿತ ಎಣ್ಣೆಯನ್ನು ಬಳಸುವುದನ್ನು ಸಹ ನಿರ್ಬಂಧಿಸಲಾಗುತ್ತಿದೆ.
ಆದರೆ ಪ್ರತಿ ವರ್ಷವೂ ಇಂತಹ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಇದು ಸ್ಪರ್ಧೆಯ ಉತ್ಸಾಹವನ್ನು ಕಡಿಮೆ ಮಾಡುತ್ತದೆ ಎಂದು ಆಯೋಜಕರು ದೂರಿದ್ದಾರೆ.
Advertisement