

ಬೆಳಗಾವಿ: ಕನ್ನಡ ರಾಜ್ಯೋತ್ಸವ ದಿನದಂದೇ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಕರಾಳ ದಿನಾಚರಣೆ ಮಾಡಿದ ಹಿನ್ನೆಲೆ, ಬೆಳಗಾವಿ ಮಾರ್ಕೆಟ್ ಪೊಲೀಸರು 38 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಅನುಮತಿಯಿಲ್ಲದೆ ರ್ಯಾಲಿ ನಡೆಸಿದ ಮತ್ತು ಭಾಷಾ ದ್ವೇಷವನ್ನು ಉತ್ತೇಜಿಸುವ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಎಂಇಎಸ್‌ನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸೇರಿದಂತೆ 38 ವ್ಯಕ್ತಿಗಳ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನವೆಂಬರ್ 1 ರಂದು ಕರಾಳ ದಿನವನ್ನು ಆಚರಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿತ್ತು. ಆದರೆ ಪೊಲೀಸರು ಯಾವುದೇ ರ್ಯಾಲಿ ಅಥವಾ ಸಭೆಗೆ ಅನುಮತಿ ನಿರಾಕರಿಸಿದ್ದರು. ಇದರ ಹೊರತಾಗಿಯೂ, ಮಹಾರಾಷ್ಟ್ರ ಏಕೀಕರಣ ಸಮಿತಿ ಪದಾಧಿಕಾರಿಗಳು ಕಪ್ಪು ಬಾವುಟಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ರ್ಯಾಲಿಯನ್ನು ಮುಂದುವರೆಸಿದರು. ಘಟನೆಯ ವೀಡಿಯೊ ಮತ್ತು ಛಾಯಾಚಿತ್ರ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ ಮತ್ತು ಕಾನೂನು ಕ್ರಮ ಕೈಗೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಬೋರ್ಸೆ, ತನಿಖೆ ನಡೆಯುತ್ತಿದ. ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ನವೆಂಬರ್ 2 ರಂದು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ಪ್ರಕರಣ ದಾಖಲಾಗಿದೆ. ಮಾಜಿ ಶಾಸಕ ಮನೋಹರ್ ಕಲ್ಲಪ್ಪ ಕಿನೇಕರ್ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕ ಸುವ್ಯವಸ್ಥೆ ಉಲ್ಲಂಘನೆ ಮತ್ತು ಸರ್ಕಾರದ ನಿರ್ದೇಶನಗಳನ್ನು ಪಾಲಿಸದಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement