

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಬಹು ವರ್ಷಗಳ ಕನಸಾದ ‘ಗ್ರೇಟರ್ ಮೈಸೂರು’ ರಚನೆ ಮುನ್ನೆಲೆಗೆ ಬಂದಿದ್ದು, ಶೀಘ್ರದಲ್ಲಿಯೇ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯುವ ಸಾಧ್ಯತೆ ಇದೆ.
ಗ್ರೇಟರ್ ಮೈಸೂರು ಆಗಬೇಕು. ಆದರೆ, ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ, ವಿಶಾಲತೆಗೆ ಧಕ್ಕೆ ಆಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಪಾಲಿಕೆ ಕಚೇರಿಯಲ್ಲಿ ತಮ್ಮದೇ ಅಧ್ಯಕ್ಷತೆಯಲ್ಲಿ ನಡೆದ ಮೊದಲ "ಗ್ರೇಟರ್ ಮೈಸೂರು" ಸಭೆಯಲ್ಲಿ ಅಧಿಕಾರಿಗಳಿಗೆ ತಮ್ಮ ಸ್ಪಷ್ಟ ಪರಿಕಲ್ಪನೆಗಳನ್ನು ವಿವರಿಸಿ ಸೂಚನೆಗಳನ್ನು ನೀಡಿದರು. ಬೆಂಗಳೂರಿನ ರೀತಿ ಟ್ರಾಫಿಕ್ ಸಮಸ್ಯೆ, ಒಳಚರಂಡಿ, ಫುಟ್ ಪಾತ್, ಕುಡಿಯುವ ನೀರು, STP ಯಾವುದರ ಸಮಸ್ಯೆಯೂ ಇರದಂತೆ ಸ್ಪಷ್ಟ ವೈಜ್ಞಾನಿಕ ನೀಲನಕ್ಷೆ ಸಿದ್ಧಪಡಿಸುವಂತೆ ಜಿಲ್ಲಾಡಳಿತಕ್ಕೆ ಸಿಎಂ ಸೂಚನೆ ನೀಡಿದರು.
ಮುಂದಿನ ಅಥವಾ ನಂತರದ ಸಚಿವ ಸಂಪುಟ ಸಭೆಯಲ್ಲಿ ಗ್ರೇಟರ್ ಮೈಸೂರು ರಚನೆಯ ಪ್ರಸ್ತಾವನೆ ಮಂಡಿಸಿ ಅನುಮೋದನೆ ನೀಡಿದ ಬಳಿಕ ರಚನೆಯಾಗಲಿದೆ. ಈ ಎಲ್ಲ ಪ್ರಕ್ರಿಯೆಗಳನ್ನು ಡಿಸೆಂಬರ್ ವೇಳೆಗೆ ಮುಗಿಸಲು ಅಂತಿಮ ಗಡುವು ನೀಡಲಾಗಿದೆ. ಇದರಿಂದಾಗಿ ಅವಧಿ ಮುಗಿದಿರುವ ಮೈಸೂರು ನಗರಪಾಲಿಕೆ ಚುನಾವಣೆ ಸದ್ಯಕ್ಕೆ ನಡೆಯುವುದಿಲ್ಲ ಎನ್ನಲಾಗಿದೆ.
ಸಿದ್ದಾರ್ಥ ನಗರದಲ್ಲಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸ್ಥಾಪಿಸಿರುವ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಲು ಮುಂದಾದಾಗ ಕಾಂಗ್ರೆಸ್ ಕಾರ್ಯಕರ್ತರೊಬ್ಬರು 2ನೇ ದೇವರಾಜ ಅರಸು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜೈ ಎಂದು ಕೂಗಿದರು. ಇದಕ್ಕೆ ಕೆಂಡಮಂಡಲವಾದ ಸಿದ್ದರಾಮಯ್ಯ, ‘ಏಯ್ ಯಾರೋ ಅವನು, ದೇವರಾಜ ಅರಸು ಅವರಿಗೆ ಅವರೇ ಸಾಟಿ, ಅವರು ಅವರೇ, ನಾನು ನಾನೇ. ನನಗೂ ಅವರಿಗೂ ಹೋಲಿಕೆ ಮಾಡಬೇಡ, ಸುಮ್ಮನಿರಯ್ಯ’ ಎಂದು ಸುಮ್ಮನಿರಿಸಿದರು.
Advertisement