

ಬೆಂಗಳೂರು: ಬೆಂಗಳೂರಿನ ಟನಲ್ ರೋಡ್ ವಿಚಾರ ಈಗ ಸಂಸದ ತೇಜಸ್ವಿ ಸೂರ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಮಾತು ಮೇಲಾಟಕ್ಕೆ ತಿರುಗಿದೆ. ತೇಜಸ್ವಿ ಸೂರ್ಯ ಕೊಟ್ಟಿದ್ದ ಪ್ರಸ್ತಾವನೆಯನ್ನು ಡಿಕೆ ಶಿವಕುಮಾರ್ ಒಪ್ಪಿಲ್ಲ. ಹೀಗಾಗಿ ಇದೇ ವಿಚಾರ ಮತ್ತೆ ಇಬ್ಬರ ನಡುವೆ ಸಮರ ಸಾರುವಂತೆ ಮಾಡಿದೆ.
ಬೆಂಗಳೂರಿನಲ್ಲಿ ಟನಲ್ ರಸ್ತೆ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಅವರು ಕೆಲ ಟೆಕ್ನಿಕಲ್ ಪ್ರಶ್ನೆಗಳ ಹಾಕಿದ್ದು, ಇವುಗಳಿಗೆ ಉತ್ತರ ಕೊಡಿ ಎಂದು ಡಿಕೆ ಶಿವಕುಮಾರ್ಗೆ ಸವಾಲು ಹಾಕಿದ್ದಾರೆ.
ಮದುವೆ ವೇಳೆ ಕಾರಿಗಾಗಿ ಬಿಜೆಪಿ ಸಂಸದ ಪತ್ರ ಬರೆದಿದ್ದರು ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ತೇಜಸ್ವಿ ಸೂರ್ಯ ಅಲ್ಲಗಳೆದಿದ್ದಾರೆ. ಕ್ಷೇತ್ರದ ಕೆಲಸಕ್ಕೆ ಓಡಾಡಲು ಕಾರು ಬೇಕು ಅಂತ ಕೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಂದು ವರ್ಷದ ಹಿಂದೆ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದೆ. ಹಿಂದೆ ನನಗೆ ಕೊಟ್ಟಿದ್ದ ಕಾರು ಒಂದು ಲಕ್ಷ ಕೀಮೀ ಓಡಿದೆ. ಕ್ಷೇತ್ರ ಕೆಲಸಕ್ಕೆ ಓಡಾಡಲು ಕಾರು ಬೇಕಿದೆ ಎಂದು ಕೇಳಿದ್ದೆ. ಅದನ್ನ ಬಿಟ್ಟು ನನಗೆ ಯಾರು ಹೆಣ್ಣು ಕೊಡಲ್ಲ, ಕಾರು ಕೊಡಿ ಅಂತ ಕೇಳಿಲ್ಲ. ಇದು ಎಲ್ಲಾ ಸಂಸದರಿಗೂ ಕೊಡಬೇಕಿರೋ ನಿಯಮ. ಈ ಪತ್ರವನ್ನ ಬಿಡುಗಡೆ ಮಾಡುತ್ತೇನೆಂದು ಹೇಳಿದ್ದರು. ನಾನೇ ರಿಲೀಸ್ ಮಾಡುತ್ತಿದ್ದೇನೆ ಎಂದು ತೇಜಸ್ವಿ ಸೂರ್ಯ ತಿರುಗೇಟು ನೀಡಿದರು. ಕಾರಿಗೆ ಎಲಿಜಿಬಿಲಿಟಿ ಮದುವೆ ವಿಚಾರ ಅಲ್ಲ. ಸಾಗರ್ ಖಂಡ್ರೆಯಂತಹ ಬ್ಯಾಚುಲರ್‌ಗೆ ಕೂಡ ಕಾರು ಕೊಟ್ಟಿದ್ದಾರೆ. ಕಾನೂನು ಪ್ರಕಾರ ಕೊಡಲು ಅವಕಾಶ ಇದೆ ಎಂದರು.
ನನ್ನ ಮೇಲೆ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಬೇರೆ ಯಾವ ಉತ್ತರ ಕೊಡುತ್ತಿಲ್ಲ. ಟನಲ್‌ನಲ್ಲಿ ದ್ವಿಚಕ್ರ ವಾಹನ, ಆಟೋಗಳಿಗೆ ಅವಕಾಶ ಇಲ್ಲ. ಟ್ಯಾಕ್ಸ್ ಕಟ್ಟುವವರನ್ನ ಒಳಬಿಡಲ್ಲ ಅಂದರೆ ಇದು ಆರ್ಥಿಕ ಅಸ್ಪೃಶ್ಯತೆ ಅಲ್ವಾ? ಇದು ಸರಿಯಲ್ಲ. ಟನಲ್ ರೋಡ್‌ನಲ್ಲಿ ಗಂಟೆಗೆ 1,800 ಜನ ಓಡಾಡಬಹುದು. ಆದರೆ, ಮೆಟ್ರೋ ಮಾಡಿದ್ರೆ 60 ಸಾವಿರ ಜನ ಓಡಾಡಬಹುದು.
ಸರ್ವೆಗಳಾಗದೇ ಟೆಂಡರ್ ಕರೆದಿದ್ದೀರಾ? ನಿಮ್ಮದೇ ಡಿಪಿಆರ್‌ನಲ್ಲಿ 2031 ಕ್ಕೆ ಪೂರ್ಣಗೊಳ್ಳುತ್ತೆ ಅಂತ ಇದೆ. ಈಜೀಪುರ ಸೇತುವೆ ಗುಂಡಿಗಳನ್ನೇ ಹೇಳಿದ ಸಮಯಕ್ಕೆ ಮುಚ್ಚೋಕೆ ಆಗಿಲ್ಲ. ಡಿಪಿಆರ್ 2031ಕ್ಕೆ 12 ನಿಮಿಷ, 2041 ಕ್ಕೆ 14 ನಿಮಿಷ ಉಳಿಯಲಿದೆ ಅಂತಾರೆ ಎಂದು ವಾಗ್ದಾಳಿ ನಡೆಸಿದರು.
ಯಲ್ಲೋ ಲೈನ್ ನಲ್ಲಿ 37% ಟ್ರಾಫಿಕ್ ಕಡಿಮೆ ಆಗಿದೆ ಎಂದು ನೀವೇ ಹೇಳುತ್ತೀರಾ. ಹೀಗಿದ್ರು ಟನಲ್ ಗೆ ಯಾಕೆ ಬೆಂಬಲ ಕೊಡುತ್ತಿದ್ದೀರಾ? ಡಿಪಿಆರ್ ಪ್ರಕಾರ ಮುಂದೆ ಈಗಿನ ಖರ್ಚಿಗಿಂತ 25% ಹೆಚ್ಚಳ ಆಗಲಿದೆ. ಕೇಂದ್ರ ಸರ್ಕಾರ ಅಟಲ್ ಟನಲ್ ಗೆ 9 ಕಿಮೀ 3200 ಕೋಟಿ ರೂ. ವೆಚ್ಚದಲ್ಲಿ ಮಾಡಿದ್ದಾರೆ.
ಇಲ್ಲಿ ಯಾವ ಪರ್ವತ ಇದೆ. ಕಿ.ಮೀ ಗೆ 1050 ಕೋಟಿ ರೂ, ಖರ್ಚು ಮಾಡುತ್ತಿದ್ದೀರಿ. ಇಲ್ಲಿ ಯಾರ ವೈಯಕ್ತಿಕ ಟೀಕೆ ಇಲ್ಲ. ಇಲ್ಲಿ ಮದುವೆ, ಎಳಸು ಚರ್ಚೆ ಬದಲು ಈ ಪ್ರಶ್ನೆಗಳಿಗೆ ಉತ್ತರ ಕೊಡಿ. ಆದಷ್ಟು ಬೇಗ ಸಮಿತಿ ರಚನೆ ಮಾಡಲಿ ನಾನು ಅದಕ್ಕೆ ಕಾಯಿತ್ತಿದ್ದೇನೆ ಎಂದರು.
Advertisement