

ಬೆಂಗಳೂರು: ಮದ್ಯದ ಮತ್ತಿನಲ್ಲಿ ಕೆಲಸಕ್ಕೆ ಬರುತ್ತಿದ್ದ ಎಲೆಕ್ಟ್ರಿಕ್ ಬಸ್ ಡ್ರೈವರ್ಗಳ ಬಳಿ ಲಂಚ ಪಡೆದು ಕರ್ತವ್ಯಕ್ಕೆ ನಿಯೋಜನೆ ಮಾಡುತ್ತಿದ್ದ ಡಿಪೋ ಮ್ಯಾನೇಜರ್ ಸೇರಿದಂತೆ 9 ಮಂದಿಯನ್ನು BMTC ಅಮಾನತುಗೊಳಿಸಿದೆ.
ಅಕ್ಟೋಬರ್ 13ರಂದು ಖಾಸಗಿ ಸುದ್ದಿವಾಹಿತಿಯೊಂದು ಈ ಬಗ್ಗೆ ವರದಿ ಪ್ರಕಟಿಸಿತ್ತು. ವರದಿ ಬಂದ ಬೆನ್ನಲ್ಲೇ ಬಿಎಂಟಿಸಿ, ಕಠಿಣ ಕ್ರಮವನ್ನು ತೆಗೆದುಕೊಂಡಿದೆ.
ಡಿಪೋ- 35ರ ಎಲೆಕ್ಟ್ರಿಕ್ ಬಸ್ಗಳ ಕೆಲವು ಚಾಲಕರು ಮದ್ಯ ಸೇವಿಸಿ ಕರ್ತವ್ಯಕ್ಕೆ ಬರುತ್ತಿದ್ದರು. ಹೀಗಿದ್ದರೂ ಅಧಿಕಾರಿಗಳು ಚಾಲಕರಿಂದ ಸಾವಿರಾರು ರೂ. ಲಂಚ ಪಡೆದು ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡುತ್ತಿದ್ದರು.
ನಿಯಮಗಳ ಪ್ರಕಾರ ಬಸ್ ಚಾಲನೆ ಮಾಡಲು ಡಿಪೋಗೆ ಬರುವ ಪ್ರತಿ ಚಾಲಕನನ್ನು ಮದ್ಯ ಸೇವನೆ ಸಂಬಂಧ ತಪಾಸಣೆ ನಡೆಸುವುದು ಕಡ್ಡಾಯವಾಗಿದೆ. ಮದ್ಯ ಸೇವನೆ ಮಾಡಿ ಬಂದಿದ್ದರೆ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೀಗಿದ್ದರೂ ಮದ್ಯ ಸೇವನೆ ಮಾಡಿದ ಚಾಲಕರಿಂದ ಲಂಚದ ಹಣ ಪಡೆದು ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡುವ ಮೂಲಕ ಬಿಎಂಟಿಸಿ ಅಧಿಕಾರಿಗಳೇ ಜನರ ಜೀವಗಳ ಜೊತೆ ಚಲ್ಲಾಟ ಆಡುತ್ತಿದ್ದರು.
ಸಂಚಾರ ನಿರೀಕ್ಷಕ ಶ್ರೀನಿವಾಸ, ಘಟಕ ವ್ಯವಸ್ಥಾಪಕ ಎಂ.ಜಿ ಕೃಷ್ಣ, ಡಿ.ಇ.ಎಸ್. ಅರುಣ್ ಕುಮಾರ್, ಕಿರಿಯ ಸಹಾಯಕಿ ಪ್ರತಿಭಾ ಕೆ.ಎಸ್., ಕ.ರಾ.ಸಾ.ಹವಲ್ದಾರ್ ಮಂಜುನಾಥ ಎಂ., ಕ.ರಾ.ಸಾ. ಪೇದೆಗಳಾದ ಮಂಜುನಾಥ ಎಸ್.ಜಿ., ಚೇತನಕುಮಾರ್, ಪುನೀತ್ ಕುಮಾರ್, ಲಕ್ಷ್ಮೀ ಕೆ. ಅವರನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶಿಸಿದೆ. ಬೆಂಗಳೂರು ನಗರದಲ್ಲಿ ಮೇಲಿಂದ ಮೇಲೆ ಬಿಎಂಟಿಸಿ ಬಸ್ಗಳು ಅಪಘಾತಕ್ಕೀಡಾಗುತ್ತಿರುವ ಹೊತ್ತಿನಲ್ಲೇ ಈ ಅಘಾತಕಾರಿ ಪ್ರಕರಣ ಬಯಲಾಗಿದೆ.
Advertisement