

ಬೆಂಗಳೂರು: ನಗರದ ಕಸದಲ್ಲಿ ವಿಂಗಡಿಸಲಾದ 600 ಮೆಟ್ರಿಕ್ ಟನ್ ಒಣ ತ್ಯಾಜ್ಯದ ಕೋಟಾದಲ್ಲಿ ಪ್ರಸ್ತುತ ಪ್ರತಿದಿನ 200 ಮೆಟ್ರಿಕ್ ಟನ್ (MT) ಮಾತ್ರ ವಿದ್ಯುತ್ ಉತ್ಪಾದನೆಗೆ ಕಳುಹಿಸಲಾಗುತ್ತಿದೆ.
ಹೀಗಾಗಿ, ವಿಂಗಡಣೆ ಪ್ರಕ್ರಿಯೆಯನ್ನು ವೇಗಗೊಳಿಸುವ ಮೂಲಕ ಈ ಪ್ರಮಾಣವನ್ನು 500 ಮೆಟ್ರಿಕ್ ಟನ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಪ್ರಾಧಿಕಾರ (BSWML) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀ ಗೌಡ ತಿಳಿಸಿದ್ದಾರೆ.
ಬಿಡದಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರವನ್ನು ಪರಿಶೀಲಿಸಿದ ಕರಿಗೌಡ, ವಿದ್ಯುತ್ ತಯಾರಿಸಲು 400 ಟನ್ ತ್ಯಾಜ್ಯವನ್ನು ಮಂಡೂರಿನ ತ್ಯಾಜ್ಯ ವಿಂಗಡಣೆ ಮತ್ತು ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳಿಂದ ಪ್ರತಿದಿನ ಪೂರೈಸಲಾಗುತ್ತಿದೆ ಎಂದು ಹೇಳಿದರು.
ಮನೆಗಳಿಂದ ಸಂಗ್ರಹಿಸಲಾದ ಒಣ ತ್ಯಾಜ್ಯವನ್ನು ಬೇರ್ಪಡಿಸುವ ಕಾರ್ಯವನ್ನು ತ್ವರಿತಗೊಳಿಸಿ ದಿನಕ್ಕೆ 500MT ತ್ಯಾಜ್ಯ ಪೂರೈಸಲು ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಲಾಗಿದೆ. ನವೆಂಬರ್ ಅಂತ್ಯದ ವೇಳೆಗೆ, ನಾವು ಮಂಡೂರನ್ನು ಅವಲಂಬಿಸುವುದನ್ನು ನಿಲ್ಲಿಸುತ್ತೇವೆ" ಎಂದು ಕರಿಗೌಡ ತಿಳಿಸಿದ್ದಾರೆ.
ಬಿಡದಿಯಲ್ಲಿ ಸ್ಥಾಪನೆಯಾಗಿರುವ ಸ್ಥಾವರ ನಿತ್ಯ 11.5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಈಗ ಮನೆ ಮನೆ ಕಸ ಸಂಗ್ರಹಿಸುವಾಗಲೇ ವಿಂಗಡಣೆ ಕಡ್ಡಾಯ ಮಾಡಲಾಗಿದೆ. ಮಿಶ್ರ ತ್ಯಾಜ್ಯದಿಂದ ಆರ್‌ಡಿಎಫ್ (Refuse Derived Fuel) ಅನ್ನು ಬೇರ್ಪಡಿಸಿ ಬಿಡದಿ ಘಟಕಕ್ಕೆ ಕಳುಹಿಸಲಾಗುತ್ತಿದೆ.
ಇದರ ಪರಿಣಾಮವಾಗಿ, ಕಳೆದ ತಿಂಗಳು ಲ್ಯಾಂಡ್‌ಫಿಲ್‌ಗೆ ಹೋಗುತ್ತಿದ್ದ 390 ಕಾಂಪ್ಯಾಕ್ಟರ್‌ಗಳ ಸಂಖ್ಯೆ 340ಕ್ಕೆ ಇಳಿದಿದೆ. ನಗರವಾಸಿಗಳು ಮನೆಯಲ್ಲೇ ಒಣ ಮತ್ತು ಹಸಿ ಕಸವನ್ನು ವಿಂಗಡಿಸಿ ಆಟೊ ಟಿಪ್ಪರ್‌ಗಳಿಗೆ ನೀಡಿದರೆ, ಬಿಡದಿ ಮಾದರಿಯಲ್ಲಿ ಇನ್ನೂ ಮೂರು ಘಟಕಗಳನ್ನು ಸ್ಥಾಪಿಸಿ ಒಂದು ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಸಬಹುದು ಎಂದು ಅವರು ತಿಳಿಸಿದರು.
ಪ್ರತಿ ಮನೆಯು ದಿನಕ್ಕೆ ಸರಾಸರಿ ಐದು ಯೂನಿಟ್ ವಿದ್ಯುತ್ ಬಳಸಿದರೆ, ಸುಮಾರು 25,000 ಮನೆಗಳಿಗೆ ವಿದ್ಯುತ್ ಪೂರೈಸಲು ಸಾಧ್ಯವಿದೆ. ತ್ಯಾಜ್ಯ ವಿಂಗಡಣೆಯನ್ನು ಸುಧಾರಿಸಿದರೆ, ಇನ್ನೂ ಮೂರು ಘಟಕಗಳನ್ನು ಸ್ಥಾಪಿಸಬಹುದು ಮತ್ತು ಒಂದು ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಸಬಹುದು ಎಂದು KPCL ಕಾರ್ಯನಿರ್ವಾಹಕ ಎಂಜಿನಿಯರ್ ಸತೀಶ್ ಕುಮಾರ್ ಹೇಳಿದರು.
ಬಿಡದಿ ಸ್ಥಾವರವನ್ನು ಕೆಪಿಸಿಎಲ್ ಒಡೆತನದ 163 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಸ್ಥಾವರವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ನಿರ್ದೇಶನಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಗಾಳಿಯನ್ನು ಕಲುಷಿತಗೊಳಿಸುವುದಿಲ್ಲ ಎಂದು ಕುಮಾರ್ ಹೇಳಿದರು. ವಾಸನೆ ಹರಡುವುದನ್ನು ತಡೆಯಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
Advertisement