

ಬೆಂಗಳೂರು: ಪ್ರತಿ ಟನ್ ಕಬ್ಬಿಗೆ 100 ರೂ. ಹೆಚ್ಚಿಸಿರುವ ಸರ್ಕಾರದ ತೀರ್ಮಾನವನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಮಾಲೀಕರ ಮಹತ್ವದ ಸಭೆಯಲ್ಲಿ ತೆಗೆದುಕೊಂಡ ಮಹತ್ತರ ತೀರ್ಮಾನವನ್ನು ಸ್ವಾಗತಿಸುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‍ನಲ್ಲಿ ಕಬ್ಬು ಬೆಳೆಗಾರರು, ರಾಜ್ಯ ರೈತ ಸಂಘ, ಹಸಿರು ಸೇನೆ ಶಾಂತಿಯುತ ಹೋರಾಟ ನಡೆಸಿದ್ದರು. ಇದು ಕಬ್ಬು ಬೆಳೆಗಾರರು, ರೈತ ಸಂಘದ ಹೋರಾಟಕ್ಕೆ ಸಂದ ಜಯ. ಮುಖ್ಯಮಂತ್ರಿಗಳು ಒಂದು ಅಥವಾ ಎರಡು ತಿಂಗಳ ಮೊದಲೇ ಈ ಸಭೆ ನಡೆಸಬೇಕಿತ್ತು.
ರೈತರು ಬೀದಿಗಿಳಿದು ಹೋರಾಟ ಮಾಡಿ, ಆ ಹೋರಾಟವು ರಾಜ್ಯದ ಇತರ ಜಿಲ್ಲೆಗಳಿಗೆ ಹಬ್ಬುವ ಸಂದರ್ಭದಲ್ಲಿ ನಾವು ಕೂಡ ಹೋರಾಟದ ಸ್ಥಳಕ್ಕೆ ಭೇಟಿ ಕೊಟ್ಟು ಹೋರಾಟಕ್ಕೆ ಬೆಂಬಲ ನೀಡಿದ್ದೆವು. ಬಳಿಕ ಎಚ್ಚೆತ್ತ ಸರ್ಕಾರ, ಮುಖ್ಯಮಂತ್ರಿಗಳು ಈ ಸಭೆ ಕರೆದಿದ್ದರು. ಮುಖ್ಯಮಂತ್ರಿಗಳು ತುಮಕೂರಿನ ಎಲ್ಲ ಕಾರ್ಯಕ್ರಮಗಳನ್ನೂ ರದ್ದು ಮಾಡಿ ಈ ಸಭೆ ನಡೆಸಿದ್ದಾರೆ. ಸಭೆಯ ತೀರ್ಮಾನವನ್ನು ಸ್ವಾಗತಿಸುವೆ ಎಂದು
ಈ ಸಂಬಂಧ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಕಬ್ಬು ಬೆಳೆಗಾರರು ನಡೆಸಿದ ಸಂಘಟಿತ ಹೋರಾಟಕ್ಕೆ ಮಣಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಪಡಿಸಿ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಎಂದಿದ್ದಾರೆ.
ಆದರೆ ನೆರೆ-ಬರ ಪರಿಹಾರ ಇರಲಿ, ಗೊಬ್ಬರ ವಿತರಣೆ ಇರಲಿ, ಖರೀದಿ ಕೇಂದ್ರಗಳ ತೆರೆಯುವಿಕೆ ಇರಲಿ, ಈ ಸರ್ಕಾರ ಬಂದಾಗಿನಿಂದ ಕಳೆದ ಎರಡೂವರೆ ವರ್ಷಗಳಲ್ಲಿ ರೈತರಿಗೆ ಸಂಬಂಧಪಟ್ಟ ಬಹುತೇಕ ನಿರ್ಧಾರಗಳು ಘೋಷಣೆ, ಭರವಸೆಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ಕಾಂಗ್ರೆಸ್ ಸರ್ಕಾರ ಈ ನಿರ್ಧಾರವನ್ನೂ ಪ್ರಾಮಾಣಿಕವಾಗಿ ಜಾರಿ ಮಾಡುವ ಬಗ್ಗೆ ನಮಗೆ ಅನುಮಾನಗಳಿವೆ.
ಕಬ್ಬು ಕಟಾವು, ಲೋಡಿಂಗ್, ಸಾಗಣೆ ಮತ್ತು ಅನ್‌ಲೋಡಿಂಗ್ ಸಂದರ್ಭದಲ್ಲಿ ರೈತರಿಗೆ ಆಗುವ ಸುಲಿಗೆ ಮತ್ತು ವಂಚನೆ, ಸಕ್ಕರೆ ಕಾರ್ಖಾನೆಗಳಲ್ಲಿ ತೂಕ ಹಾಕುವ ಸಂದರ್ಭದಲ್ಲಿ ಆಗುವ ಮೋಸ, ಕಬ್ಬು ಪೂರೈಸಿದ 14 ದಿನಗಳೊಳಗೆ ರೈತರಿಗೆ ಸಂಪೂರ್ಣ ಹಣ ಪಾವತಿ ಮಾಡಬೇಕು ಎಂಬ ನಿಯಮವಿದ್ದರೂ ಬಿಲ್ ಪಾವತಿ ವಿಳಂಬ ಆಗುವುದು, ಈ ರೀತಿ ಅನೇಕ ಸಮಸ್ಯೆಗಳನ್ನು ನಮ್ಮ ರೈತರು ಎದುರಿಸುತ್ತಲೇ ಇದ್ದಾರೆ. ಈ ಬಾರಿ ಯಾವ ಸಮಸ್ಯೆಯೂ ಬರದಂತೆ ರೈತರಿಗೆ ಸಕಾಲಕ್ಕೆ ಸಿಗಬೇಕಾದ ನ್ಯಾಯಯುತ ಹಣ ಸಿಗುವಂತೆ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕೆಂದು ಸಿಎಂ ಅವರನ್ನು ಒತ್ತಾಯಿಸುತ್ತೇನೆ ಎಂದರು.
ಸಭೆಯಲ್ಲಿ ಮುಖ್ಯಮಂತ್ರಿಗಳಲ್ಲದೆ, ಸಚಿವ ಸಂಪುಟದ ಸದಸ್ಯರು ನನ್ನ ಮೇಲೆ ಹರಿಹಾಯ್ದಿದ್ದಾರೆ. ವಿಜಯೇಂದ್ರ ಅವರು ಯಾಕೆ ಹೋರಾಟಕ್ಕೆ ಹೋಗಬೇಕಿತ್ತು?. ರೈತರ ಪ್ರಚೋದನೆ ಮಾಡುವ ಕೆಲಸವನ್ನು ನಾವು ಮಾಡಿದ್ದಾಗಿ ಆರೋಪ ಮಾಡಿದ್ದಾರೆ. ಹೋರಾಟ ಪ್ರಾರಂಭವಾದ 5 ದಿನಗಳ ನಂತರ ನಾವು ಹೋಗಿದ್ದೇವೆ. ಹೋರಾಟ ಪ್ರಾರಂಭವಾದಾಗ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದಿದ್ದಾಗ, 5 ದಿನ ಕಳೆದರೂ ಉಸ್ತುವಾರಿ ಸಚಿವರು, ಸಕ್ಕರೆ ಖಾತೆ ಸಚಿವರು, ಯಾವ ಸಚಿವರೂ ಹೋರಾಟದ ಕಡೆ ತಿರುಗಿ ನೋಡಲಿಲ್ಲವೋ ಆಗ ನಾವು ಅಲ್ಲಿಗೆ ತೆರಳಿ ಹೋರಾಟಕ್ಕೆ ಬೆಂಬಲ ನೀಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
Advertisement