

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಮಾಜ್ ಮಾಡುವುದನ್ನು ರಾಜ್ಯ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಹೆಚ್ಚಿನ ಭದ್ರತಾ ವಲಯದಲ್ಲಿ ಅಂತಹ ಕೃತ್ಯಕ್ಕೆ ಹೇಗೆ ಅವಕಾಶ ನೀಡಲಾಗಿದೆ ಎಂದು ಪ್ರಶ್ನಿಸಿದೆ.
ಪಕ್ಷದ ವಕ್ತಾರ ವಿಜಯ್ ಪ್ರಸಾದ್, ಅನುಮತಿ ಕೊಟ್ಟವರು ಯಾರು ಎಂಬುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಸ್ಪಷ್ಟೀಕರಣವನ್ನು ಕೋರಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಈ ಘಟನೆ ನಡೆದಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಭಾನುವಾರ ರಾತ್ರಿ ಪೋಸ್ಟ್ ಮಾಡಿರುವ ವಿಜಯ್ ಪ್ರಸಾದ್,ಈ ವ್ಯಕ್ತಿಗಳು ಹೆಚ್ಚಿನ ಭದ್ರತಾ ವಿಮಾನ ನಿಲ್ದಾಣ ವಲಯದಲ್ಲಿ ನಮಾಜ್ ಮಾಡಲು ಪೂರ್ವಾನುಮತಿ ಪಡೆದಿದ್ದಾರೆಯೇ? ಸಂಬಂಧಪಟ್ಟ ಅಧಿಕಾರಿಗಳಿಂದ ಸೂಕ್ತ ಅನುಮತಿ ಪಡೆದ ನಂತರ ಆರ್‌ಎಸ್‌ಎಸ್ ಪಥ ಸಂಚಲನ ನಡೆಸಲು ಸರ್ಕಾರ ಏಕೆ ಆಕ್ಷೇಪಿಸುತ್ತದೆ, ಆದರೆ ನಿರ್ಬಂಧಿತ ಸಾರ್ವಜನಿಕ ಪ್ರದೇಶದಲ್ಲಿ ನಮಾಜ್ ನಂತಹ ಚಟುವಟಿಕೆಗಳಿಗೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಇಂತಹ ಸೂಕ್ಷ್ಮ ವಲಯದಲ್ಲಿ ಇದು ಗಂಭೀರ ಭದ್ರತಾ ಕಾಳಜಿಯನ್ನು ಉಂಟುಮಾಡುವುದಿಲ್ಲವೇ?" ಎಂದು ಅವರು ದಿನಾಂಕವಿಲ್ಲದ ಘಟನೆಯ ಫೋಟೋ ಮತ್ತು ವೀಡಿಯೊವನ್ನು ಹಂಚಿಕೊಂಡು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
Advertisement