News headlines 10-11-2025 | ಕೈದಿಗಳಿಗೆ ರಾಜಾತಿಥ್ಯ; ಇಬ್ಬರು ಅಧಿಕಾರಿಗಳು ಅಮಾನತು; ವಿಮಾನ ನಿಲ್ದಾಣದಲ್ಲಿ ನಮಾಜ್; ಹಿಂದೂಗಳಂತೆ ಅವರು ನಾಮಹಾಕಿ ತಟ್ಟೆ ಹಿಡಿಯಲ್ಲ- ಹೆಚ್ ಆಂಜನೇಯ; ಎತ್ತಿನಹೊಳೆ; ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ತಡೆ!

News headlines 10-11-2025 | ಕೈದಿಗಳಿಗೆ ರಾಜಾತಿಥ್ಯ; ಇಬ್ಬರು ಅಧಿಕಾರಿಗಳು ಅಮಾನತು; ವಿಮಾನ ನಿಲ್ದಾಣದಲ್ಲಿ ನಮಾಜ್; ಹಿಂದೂಗಳಂತೆ ಅವರು ನಾಮಹಾಕಿ ತಟ್ಟೆ ಹಿಡಿಯಲ್ಲ- ಹೆಚ್ ಆಂಜನೇಯ; ಎತ್ತಿನಹೊಳೆ; ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ತಡೆ!

1. ಕೈದಿಗಳಿಗೆ ರಾಜಾತಿಥ್ಯ; ಇಬ್ಬರು ಅಧಿಕಾರಿಗಳು ಅಮಾನತು- ಗೃಹ ಸಚಿವ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಯಮ ಮೀರಿ ಕೈದಿಗಳಿಗೆ ವಿಶೇಷ ಸವಲತ್ತು ನೀಡಿರುವ ಪ್ರಕರಣದ ಸಂಬಂಧ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಮುಖ್ಯ ಅಧೀಕ್ಷಕನನ್ನು ವರ್ಗಾವಣೆಗೊಳಿಸಲಾಗಿದೆ. ಹಿರಿಯ ಅಧಿಕಾರಿಗಳೊಂದಿಗೆ ಗೃಹ ಸಚಿವ ಪರಮೇಶ್ವರ್ ಇಂದು ಸಭೆ ನಡೆಸಿದ್ದು, ಇನ್ನು ಮುಂದೆ ಈ ರೀತಿ ಪ್ರಕರಣ ಮರುಕಳಿಸದೇ ಇರಲು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ, ಸಂದೀಪ್ ಪಾಟೀಲ್, ಅಮರನಾಥ್ ರೆಡ್ಡಿ, ರಿಷ್ಯಂತ್ ಸಮಿತಿಗೆ ಒಂದು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಜೈಲುಗಳ ಮೇಲೆ ನಿಗಾವಹಿಸಲು ಕಮಾಂಡ್ ಸೆಂಟರ್ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದ್ದು, 15 ದಿನದೊಳಗೆ ಇದು ಕಾರ್ಯನಿರ್ವಹಿಸಲಿದೆ. ಇನ್ಮುಂದೆ ಜೈಲಿನ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಇನ್ನು ಮೊಬೈಲ್ ಫೋನ್, ಟಿವಿ ಸೇರಿದಂತೆ ನಿಯಮ ಮೀರಿದ ಸವಲತ್ತನ್ನು ಕೈದಿಗಳಿಗೆ ನೀಡಿರುವ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ದರ್ಶನ್‌ ಆಪ್ತ ನಟ ಧನ್ವೀರ್‌ ನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವಿಡಿಯೋಗಳನ್ನು ಧನ್ವೀರ್‌ ಬಿಡುಗಡೆ ಮಾಡಿದ್ದಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

2. ಅಮಿತ್ ಶಾ ಗೆ ಶೋಭಾ ಕರಂದ್ಲಾಜೆ ಪತ್ರ! 

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಎಂಎಸ್‌ಎಂಇ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಜೈಲು ಭದ್ರತೆ ಮತ್ತು ಮೂಲಭೂತವಾದದಿಂದ ಮುಕ್ತಗೊಳಿಸುವ ಬಗ್ಗೆ ತುರ್ತು ರಾಷ್ಟ್ರೀಯ ಎಸ್‌ಒಪಿಯನ್ನು ಕೋರಿದ್ದಾರೆ. ಬೆಂಗಳೂರಿನ ಕೇಂದ್ರ ಜೈಲಿನ ಇತ್ತೀಚಿನ ವಿಡಿಯೋಗಳ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಪತ್ರ ಪ್ರಾಮುಖ್ಯತೆ ಪಡೆದಿದೆ. ಇನ್ನು ಜೈಲಿನಲ್ಲಿ ಖೈದಿಗಳಿಗೆ ನಿಯಮ ಮೀರಿ ಸವಲತ್ತುಗಳನ್ನು ನೀಡುತ್ತಿರುವುದಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ ಅವರ ರಾಜೀನಾಮೆಗೆ ಒತ್ತಾಯಿಸಿ ಸಿಎಂ ಮನೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

3. ವಿಮಾನ ನಿಲ್ದಾಣದಲ್ಲಿ ಸಾಮೂಹಿಕ ನಮಾಜ್; ಹಿಂದೂಗಳಂತೆ ಅವರು ನಾಮಹಾಕಿ ತಟ್ಟೆ ಹಿಡಿಯಲ್ಲ- ಮಾಜಿ ಸಚಿವ ಹೆಚ್ ಆಂಜನೇಯ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಮುಸ್ಲಿಂ ಸಮುದಾಯದ ಗುಂಪೊಂದು ನಮಾಜ್ ಮಾಡಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜ್ಯದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ವಿರೋಧ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ ಅತ್ಯಂತ ಭದ್ರತೆ ಇರುವ ವಿಮಾನ ನಿಲ್ದಾಣದೊಳಗೆ ನಮಾಜ್ ಮಾಡುವುದಕ್ಕೆ ಮುಸ್ಲಿಂ ಸಮುದಾಯಕ್ಕೆ ಹೇಗೆ ಅವಕಾಶ ನೀಡಿತು? ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಲು ಅನುಮತಿ ಇದೆಯೇ ಎಂದು ರಾಜ್ಯ ಸರ್ಕಾರವನ್ನು ಬಿಜೆಪಿ ಪ್ರಶ್ನೆ ಮಾಡಿದೆ. ಇನ್ನು ಮುಸ್ಲಿಂ ಸಮುದಾಯದ ನಡೆಯನ್ನು ಸಮರ್ಥಿಸಿಕೊಂಡಿರುವ ಮಾಜಿ ಸಚಿವ ಹೆಚ್ ಆಂಜನೇಯ, ಮುಸ್ಲಿಮರ ಶ್ರದ್ಧೆ ನೋಡಿ ನೀವು ಕಲಿಯಿರಿ. ಬಸ್ ಸ್ಟ್ಯಾಂಡ್ ಇರಲಿ, ರಸ್ತೆ ಇರಲಿ ಅಥವಾ ವಿಮಾನ ನಿಲ್ದಾಣವೇ ಆಗಲಿ ಸಾಮೂಹಿಕ ಪ್ರಾರ್ಥನೆಯನ್ನ ಅಚ್ಚುಕಟ್ಟಾಗಿ ಮಾಡುತ್ತಾರೆ. ನಮ್ಮವರಂತೆ ನಾಮ ಹಾಕಿಕೊಂಡು, ಪೂಜೆ ಮಾಡಿ ತಟ್ಟೆಗೆ ದಕ್ಷಿಣೆ ಹಾಕಿ ಎಂದು ಕೇಳಲ್ಲ ಅವರು ಮೂರ್ಖರಲ್ಲ ಎಂದು ಹೇಳಿದ್ದಾರೆ.

4. ಶಿಕ್ಷಣ ಸೂಚ್ಯಂಕದಲ್ಲಿ 7-14 ನೇ ಸ್ಥಾನಕ್ಕೆ ಕುಸಿದ ಮೈಸೂರು- ಸಿದ್ದರಾಮಯ್ಯ ಬೇಸರ

ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಜಿಲ್ಲೆ 7ನೇ ಸ್ಥಾನದಿಂದ 14ನೇ ಸ್ಥಾನಕ್ಕೆ ಇಳಿದಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೆಡಿಪಿ ಸಭೆಯಲ್ಲಿ ಮಾತನಾಡಿರುವ CM, ಸೂಚ್ಯಂಕ ಕುಸಿತ ಇಲ್ಲಿನ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಹೇಗಿದೆ ಎಂಬುದನ್ನು ತೋರಿಸುತ್ತದೆ. ಮೈಸೂರು ಶಿಕ್ಷಣಕ್ಕೆ ಮೊದಲಿನಿಂದಲೂ ಅತ್ಯಂತ ಪ್ರಾಮುಖ್ಯತೆ ನೀಡಿದ್ದ ಸಂಸ್ಥಾನ. ಇಲ್ಲಿಯೇ ಶಿಕ್ಷಣ ಸೂಚ್ಯಂಕದಲ್ಲಿ ಕುಸಿದಿರುವುದು ಸರಿಯಲ್ಲ. ಈ ಪರಿಸ್ಥಿತಿ ಸುಧಾರಿಸಬೇಕು ಎಂದು ಹೇಳಿದ್ದಾರೆ.

5. ರಾಜ್ಯದ ಎತ್ತಿನಹೊಳೆ ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರ ತಡೆ!

ರಾಜ್ಯದ ಎತ್ತಿನಹೊಳೆ ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರ ತಡೆಯೊಡ್ಡಿದೆ. ಯೋಜನೆಯ ಮೊದಲ ಹಂತದಲ್ಲಿ ಹಲವು ಕಾಮಗಾರಿಗಳು ಅನಧಿಕೃತವಾಗಿದೆ. ಇಂತಹ ಕಾಮಗಾರಿಗಳಿಂದ ಪರಿಸರದ ಮೇಲೆ ಭಾರಿ ಅನಾಹುತವಾಗಿದೆ ಎಂದು ಕೇಂದ್ರ ಪರಿಸರ ಇಲಾಖೆಯ ಸಲಹಾ ಸಮಿತಿ ಹೇಳಿರುವ ಹಿನ್ನೆಲೆಯಲ್ಲಿ ಯೋಜನೆಯ ಮುಂದಿನ ಹಂತಕ್ಕೆ ಅನುಮತಿ ನಿರಾಕರಿಸಿದೆ. ಅಕ್ಟೋಬರ್ 27ರಂದು ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಸಭೆ ನಡೆಸಿದ್ದು, ಅದರಲ್ಲಿ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com