
ದೆಹಲಿಯ ಭದ್ರತಾ ವಲಯವಾದ ಕೆಂಪುಕೋಟೆ ಬಳಿ ನೆನ್ನೆ ಕಾರು ಸ್ಫೋಟಗೊಂಡಿದ್ದು 12 ಮಂದಿ ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹರಿಯಾಣ ನೋಂದಣಿ ಸಂಖ್ಯೆಯುಳ್ಳ ಹ್ಯುಂಡೈ ಐ20 ಕಾರು ಸಿಗ್ನಲ್ ಬಳಿ ಬಂದು ನಿಂತ ಕೂಡಲೇ ಸ್ಫೋಟ ಸಂಭವಿಸಿದೆ. ಇದು ಆತ್ಮಾಹುತಿ ಬಾಂಬ್ ದಾಳಿಯಾಗಿರಬಹುದು ಎಂದು ಶಂಕಿಸಲಾಗಿದೆ. ರಾಷ್ಟ್ರೀಯ ತನಿಖಾ ದಳ ಹಾಗೂ ರಾಷ್ಟ್ರೀಯ ಭದ್ರತಾ ಪಡೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಆರಂಭಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕ ನಾಯಕ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಸ್ಫೋಟದಲ್ಲಿ ಗಾಯಗೊಂಡ ಜನರನ್ನು ಆರೋಗ್ಯ ವಿಚಾರಿಸಿದರು. ಈ ಮಧ್ಯೆ ಪ್ರಧಾನಿ ಮೋದಿಯವರು ಘಟನೆಯಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ದೆಹಲಿಯ ಐತಿಹಾಸಿಕ ಕೆಂಪುಕೋಟೆ ಬಳಿ ಕಾರು ಸ್ಫೋಟಗೊಂಡಿದ್ದು, ದೇಶಾದ್ಯಂತ ತೀವ್ರ ಆತಂಕ ಸೃಷ್ಟಿಸಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಮಹಾ ನಿರ್ದೇಶಕರು ಡಾ. ಎಂಎ ಸಲೀಂ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಕೆಆರ್ ಮಾರುಕಟ್ಟೆ, ಮೆಜೆಸ್ಟಿಕ್, ಸಿನಿಮಾ ಮಂದಿರಗಳು, ಮಾಲ್ ಗಳು, ದೇವಾಲಯಗಳು ಸೇರಿದಂತೆ ಎಲ್ಲಾ ಜನನಿಬಿಡ ಜಾಗಗಳಲ್ಲಿ ತೀವ್ರ ತಪಾಸಣೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಇನ್ನು ದೆಹಲಿಯಲ್ಲಿ ಸ್ಫೋಟ ಸಂಭವಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಅಮಿತ್ ಶಾ ಭಾರತದ ಅತ್ಯಂತ ಅಸಮರ್ಥ ಗೃಹ ಸಚಿವರಾಗಿದ್ದಾರೆ 12 ಜನರ ಸಾವಿಗೆ ಕಾರಣವಾದ ದೆಹಲಿ ಸ್ಫೋಟವು ಗುಪ್ತಚರ ಇಲಾಖೆಯ ವೈಫಲ್ಯವನ್ನು ಸೂಚಿಸುತ್ತದೆ. ಹೀಗಾಗಿ, ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ 12 ಮಂದಿಯ ಸಾವಿಗೆ ಕಾರಣವಾದ ಬಾಂಬ್ ಸ್ಫೋಟದ ಬೆನ್ನಲ್ಲೇ ದೇಶದಲ್ಲಿ ಶಾಂತಿ ಸ್ಥಾಪನೆಗೆ ಕೆಲ ಕಠಿಣ ಕ್ರಮಗಳನ್ನು ಅನುಸರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ. ಮಕ್ಕಳನ್ನು ತೀವ್ರಗಾಮಿಗಳಾಗಿ ಪರಿವರ್ತಿಸುವ ಎಲ್ಲಾ ಮದರಸಾಗಳನ್ನು ನಿಷೇಧಿಸಬೇಕು, ಭಾರತ ವಿರೋಧಿ ಸಿದ್ಧಾಂತಗಳನ್ನು ಬೋಧಿಸುವ ಮೌಲಾನಾಗಳನ್ನು ನಿರ್ದಯವಾಗಿ ಜೈಲಿಗೆ ಹಾಕಬೇಕು, ಪತ್ರಕರ್ತರು, ರಾಜಕಾರಣಿಗಳು, ಸಾಹಿತಿಗಳು ಸೇರಿದಂತೆ ಭಯೋತ್ಪಾದಕರು ಮತ್ತು ಅವರ ಪರಿಸರ ವ್ಯವಸ್ಥೆಯ ವಿರುದ್ಧ ಮೃದು ನಿಲುವು ಹೊಂದಿರುವವರ ವಿರುದ್ಧ 24x7 ಕಣ್ಗಾವಲಿಡಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗೆ ಕೈದಿಗಳಿಗೆ ಸಿಗುತ್ತಿರುವ ವಿಶೇಷ ಸವಲತ್ತುಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಮೂರು ಎನ್ಸಿಆರ್ ಮತ್ತು ಒಂದು ಎಫ್ಐಆರ್ ದಾಖಲಿಸಿದ್ದಾರೆ. ಸಹಾಯಕ ಅಧೀಕ್ಷಕ ಇಮಾಮಾಸಾಬ್ ಮೈಗೇರಿ ಅವರು ಜೈಲರ್ ಗೋಪಿನಾಥ್ ಡಿ ಮೂಲಕ ದೂರು ಸಲ್ಲಿಸಿದ್ದು, ದೂರಿನಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ನಾಲ್ವರು ವಿಚಾರಣಾಧೀನ ಕೈದಿಗಳು ಜೈಲಿನ ಬ್ಯಾರಕ್ ಸಂಖ್ಯೆ 8, ಕೊಠಡಿ ಸಂಖ್ಯೆ 7 ರೊಳಗೆ ನೃತ್ಯ ಮಾಡುತ್ತಿರುವುದು, ನಿಷೇಧಿತ ವಸ್ತುಗಳನ್ನು ಬಳಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಇನ್ನು ಮೈಸೂರಿನ ಜೈಲಿನಲ್ಲಿಯೂ ಇದೇ ಪರಿಸ್ಥಿತಿ ಇರುವುದು ಬಹಿರಂಗವಾಗಿದೆ. ಹೈ ಸೆಕ್ಯುರಿಟಿ ಜೈಲು ಆಯ್ದ ಕೈದಿಗಳಿಗೆ ಪೂರ್ಣ ಪ್ರಮಾಣದ ಸೌಕರ್ಯ ವಲಯವಾಗಿ ರೂಪಾಂತರಗೊಂಡಿದೆ. ಮದ್ಯ, ಮಾಂಸ, ಸಿಗರೇಟ್ ಮತ್ತು ಬೀಡಿಗಳಿಂದ ಹಿಡಿದು ಮೊಬೈಲ್ ಫೋನ್‌ಗಳವರೆಗೆ ಎಲ್ಲವೂ ಹಣಕ್ಕೆ ಲಭ್ಯವಿರುವುದನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಆವರಣದಲ್ಲಿರುವ ಬಾಲಕಿಯರ ಕ್ರೀಡಾ ವಸತಿ ನಿಲಯದಲ್ಲಿನ ಅವ್ಯವಸ್ಥೆ ಕಂಡು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. ನ್ಯಾಯಮೂರ್ತಿ ಫಣೀಂದ್ರ ಅವರು ತಮ್ಮ ಆದೇಶದಲ್ಲಿ, ಹಾಸ್ಟೆಲ್‌ನಲ್ಲಿರುವ ಬಾಲಕಿಯರು ಎದುರಿಸುತ್ತಿರುವ ಶೋಚನೀಯ ಸ್ಥಿತಿಯನ್ನು ವಿವರಿಸಿದ್ದಾರೆ. ನಾನೆಂದಿಗೂ ಇಷ್ಟೊಂದು ಅವ್ಯವಸ್ಥೆಯ ವಸತಿ ನಿಲಯಕ್ಕೆ ಭೇಟಿ ನೀಡಿಲ್ಲ. ಅಧಿಕಾರಿಗಳು ಮತ್ತು ವಾರ್ಡನ್ ಇಬ್ಬರೂ ಹೆಸರಿಗೆ ಮಾತ್ರ ಕೆಲಸ ಮಾಡುತ್ತಿದ್ದಾರೆ. ಈ ಅಧಿಕಾರಿಗಳು ಹಾಸ್ಟೆಲ್‌ಗೆ ಅಪಾಯಕಾರಿಯಾಗಿದ್ದಾರೆ ಎಂದು ಉಪಲೋಕಾಯುಕ್ತರು ಹೇಳಿದ್ದಾರೆ.
Advertisement