
ಧರ್ಮಸ್ಥಳ ತಲೆಬುರುಡೆ ಪ್ರಕರಣದ ತನಿಖೆ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಅ.30ರಂದು ನೀಡಿದ್ದ ತಡೆಯಾಜ್ಞೆಯನ್ನ ತೆರವುಗೊಳಿಸಿ ಇದೀಗ ಎಸ್ಐಟಿ ತನಿಖೆಗೆ ಅನುಮತಿ ನೀಡಿದೆ. ಧರ್ಮಸ್ಥಳ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ ಅಂಡ್ ಗ್ಯಾಂಗ್ ಹೈಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣ ಸಂಬಂಧ ಎಸ್‌ಐಟಿ ಪರ ವಾದಿಸಿದ್ದ ವಿಶೇಷ ಅಭಿಯೋಜಕ ಬಿ.ಎನ್.ಜಗದೀಶ್, ಮ್ಯಾಜಿಸ್ಟ್ರೇಟ್ ಅನುಮತಿ ಪಡೆದ ನಂತರವೇ ತನಿಖೆ ನಡೆಸಲಾಗುತ್ತಿದೆ. ಎಸ್‌ಐಟಿ ತನಿಖೆಯನ್ನು ಅರ್ಜಿದಾರರೇ ಹೊಗಳಿದ್ದಾರೆಂದು ನ್ಯಾಯಾಲಕ್ಕೆ ತಿಳಿಸಿದ್ದರು. ಈ ಹಿನ್ನಲೆ ತನಿಖೆಗೆ ನೀಡಿದ್ದ ತಡೆಯಾಜ್ಞೆ ಹೈಕೋರ್ಟ್ ಪೀಠ ತೆರವುಗೊಳಿಸಿದೆ. ಅಲ್ಲದೆ ಆರೋಪಿಗಳಿಗೆ ಕಿರುಕುಳ ನೀಡದಂತೆ ಮಧ್ಯಂತರ ಆದೇಶ ವಿಸ್ತರಿಸಿದೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಇದೀಗ ಆಡಳಿತ ಪಕ್ಷ ಕಾಂಗ್ರೆಸ್ ನ ಶಾಸಕ ರಾಜು ಕಾಗೆಯವರೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. 15 ಜಿಲ್ಲೆಗಳನ್ನೊಳಗೊಂಡ ಉತ್ತರ ಕರ್ನಾಟಕವನ್ನು ಪ್ರತ್ಯೇಕವಾಗಿಸಲು ಕೋರಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನ್ಯಾಯ ಆಗುತ್ತಿದ್ದು, ಮಲತಾಯಿ ಧೋರಣೆ ತಾರತಮ್ಯ ತೋರಲಾಗುತ್ತಿದೆ ಎಂದು ರಾಜು ಕಾಗೆ ಆರೋಪಿಸಿದ್ದಾರೆ. ರಾಜುಕಾಗೆ ಪತ್ರದ ಬೆನ್ನಲ್ಲೇ ಉತ್ತರ ಕರ್ನಾಟಕ ಹೋರಾಟ ಸಮಿತಿ, ಉತ್ತರ ಕರ್ನಾಟಕ ವಿಕಾಸ ವೇದಿಕೆಯಿಂದ ಮೂರು ಬೇಡಿಕೆಗಳಿಗೆ ಆಗ್ರಹ ವ್ಯಕ್ತವಾಗಿದೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಇವನ್ನು ಈಡೇರಿಸದಿದ್ದರೆ ಸುವರ್ಣ ವಿಧಾನಸೌಧದ ಮೇಲೆ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಎಚ್ಚರಿಕೆ ನೀಡಲಾಗಿದೆ.
ನಟ ಉಪೇಂದ್ರ ದಂಪತಿಗಳ ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಿ, ವಾಟ್ಸಾಪ್‌ನಲ್ಲಿ ಮೆಸೇಜ್ ಮಾಡುವ ಮೂಲಕ ಹಲವಾರು ಜನರಿಂದ ಹಣ ವರ್ಗಾಯಿಸಿಕೊಂಡಿದ್ದ ಆರೋಪದ ಮೇಲೆ ಬಿಹಾರದ ಸೈಬರ್ ಅಪರಾಧಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿ ವಿಕಾಸ್ ಕುಮಾರ್ ಎಂಬಾತನನ್ನು ಬಿಹಾರದ ದಶರಥಪುರ ಗ್ರಾಮದಲ್ಲಿ ಬಂಧಿಸಲಾಗಿದ್ದು ಆತನನ್ನು ಬೆಂಗಳೂರಿಗೆ ಕರೆತರಲಾಗಿದೆ. ಕಳೆದ ಸೆಪ್ಟೆಂಬರ್ 15ರಂದು ಪ್ರಿಯಾಂಕಾ ಉಪೇಂದ್ರ ಅವರು ಆನ್‌ಲೈನ್‌ನಲ್ಲಿ ಕೆಲವು ವಸ್ತುಗಳನ್ನು ಆರ್ಡರ್ ಮಾಡಿದ್ದರು. ಅದೇ ವೇಳೆಗೆ ಕರೆ ಮಾಡಿದ್ದ ವ್ಯಕ್ತಿಯು ಅವರ ಮೊಬೈಲ್‌ಗೆ ಅನುಮಾನಾಸ್ಪದ ಲಿಂಕ್ ಅನ್ನು ಕಳುಹಿಸಿದ್ದನು. ಅದನ್ನು ಕ್ಲಿಕ್ ಮಾಡಿದ ಕೂಡಲೇ ಫೋನ್ ಹ್ಯಾಕ್ ಆಗಿದ್ದು, ವಂಚಕರು ಅವರ ವಾಟ್ಸಾಪ್ ಖಾತೆ ಮೂಲಕ 1.5 ಲಕ್ಷ ರೂಪಾಯಿ ದೋಚಿದ್ದರು.
ದೆಹಲಿ ಸ್ಫೋಟದ ಬೆನ್ನಲ್ಲೇ ವಿಪಕ್ಷ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿವೆ. ದೆಹಲಿ ಸ್ಫೋಟ ಕೇಂದ್ರ ಸರ್ಕಾರದ ವೈಫಲ್ಯ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದು, ಭಯೋತ್ಪಾದಕ ಕೃತ್ಯದ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಕೊಡಬೇಕು. ಆಗ ಮಾತ್ರ ಉಗ್ರತ್ವವನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದ್ದಾರೆ. ದೇಶದ ಭದ್ರತೆಗೆ ಸಂಬಂಧಿಸಿದಂತೆ NIA, RAWದಂತ ಉನ್ನತ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದರೂ ರಾಷ್ಟ್ರ ರಾಜಧಾನಿಯಲ್ಲೇ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ಇದು ಕೇಂದ್ರ ಸರ್ಕಾರ ವೈಫಲ್ಯ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ, 'ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆಗೆ ಅವಕಾಶ ಇಲ್ಲ. ಹಾಗಾಗಿ ಭಯೋತ್ಪಾದಕರು ಮುಸ್ಲಿಮರಾಗಲು ಸಾಧ್ಯವಿಲ್ಲ ಎಂದು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಇನ್ನು ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ವೈದ್ಯರ ನೆಟ್‌ವರ್ಕ್ ಬಗ್ಗೆ ಮಾತನಾಡಿದ ಜಮೀರ್, ಬಿಹಾರದ ಎರಡನೇ ಹಂತದ ಚುನಾವಣೆಯ ಒಂದು ದಿನ ಮೊದಲು ಸ್ಫೋಟ ನಡೆದಿರುವುದಕ್ಕೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಗಾಂಜಾ ನಶೆಯಲ್ಲಿದ್ದ ಕಾಮುಕನೊಬ್ಬ ವಿಶೇಷ ಚೇತನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ ಘಟನೆ ಬೆಂಗಳೂರಿನ ಆಡುಗೋಡಿಯಲ್ಲಿ ನಡೆದಿದೆ. ವಿಘ್ನೇಶ್ ಅಲಿಯಾಸ್ ದಾಡು ಎಂಬಾತ ಈ ಕೃತ್ಯ ನಡೆಸಿದ್ದು, ಆರೋಪಿಯನ್ನು ಹಿಡಿದು ಥಳಿಸಿರುವ ಸ್ಥಳೀಯರು ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮದುವೆ ಕಾರ್ಯಕ್ರಮಕ್ಕೆಂದು ಸಂತ್ರಸ್ತೆ ಕುಟುಂಬಸ್ಥರು ವಿಶೇಷ ಚೇತನ ಯುವತಿಯನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು. ಈ ವಿಷಯ ತಿಳಿದ ಆರೋಪಿ ವಿಘ್ನೇಶ್ ಮನೆಗೆ ನುಗ್ಗಿ ಚಿಲಕ ಹಾಕಿಕೊಂಡಿದ್ದಾನೆ. ಮನೆಗೆ ತಾಯಿ ಮರಳಿದಾಗ ಬೆತ್ತಲಾಗಿದ್ದ ಆರೋಪಿ ಬಟ್ಟೆ ಎತ್ತಿಕೊಂಡು ಹೊರಗೆ ಓಡಿದ್ದನು. ಈ ವೇಳೆ ಮಹಿಳೆ ಕೂಗಿಕೊಂಡಿದ್ದರು. ಕೂಡಲೇ ಆತನನ್ನು ಹಿಡಿದ ಸ್ಥಳೀಯರು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
Advertisement