ಗೃಹ ಸಚಿವ ಪರಮೇಶ್ವರ್ ಬಗ್ಗೆ ನಿಂದನೆ: ಚಿಕ್ಕಮಗಳೂರಿನಲ್ಲಿ ಬಿಜೆಪಿ ಯುವ ಮುಖಂಡ ಬಂಧನ, ಅಷ್ಟಕ್ಕೂ ಸಂತೋಷ್ ಕೊಟ್ಯಾನ್ ಹೇಳಿದ್ದೇನು?
ಚಿಕ್ಕಮಗಳೂರು: ಗೃಹಸಚಿವ ಡಾ. ಜಿ ಪರಮೇಶ್ವರ್ ಪುತ್ರನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಮೇಲೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೊಟ್ಯಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ನೀಡಲಾಗುತ್ತಿರುವ ಸೌಲಭ್ಯವನ್ನು ಖಂಡಿಸಿ ಮೊನ್ನೆ ಮಂಗಳವಾರ ನಡೆದಿದ್ದ ಬಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ಸಂತೋಷ್ ಕೊಟ್ಯಾನ್ ಮಾತನಾಡುವ ವೇಳೆ ಗೃಹ ಸಚಿವ ಡಾ. ಪರಮೇಶ್ವರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾಗಿ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದರು.
ಕಾಂಗ್ರೆಸ್ ಕಾರ್ಯಕರ್ತರ ದೂರಿನ ಆಧಾರದಲ್ಲಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಪೊಲೀಸರು ಸಂತೋಷ್ ಕೊಟ್ಯಾನ್ ನ್ನು ಬಂಧಿಸಿ, ಹೌಸಿಂಗ್ ಬೋರ್ಡ್ ನ್ಯಾಯಧೀಶರ ನಿವಾಸಕ್ಕೆ ಹಾಜರುಪಡಿಸಿದರು. ನಂತರ ನ್ಯಾಯಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದರು.
ಏನು ಹೇಳಿದ್ದರು?
ಸಂತೋಷ್ ಕೊಟ್ಯಾನ್ ಅವರು ಪ್ರತಿಭಟನೆಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಏನು ನಡೆದರೂ ಗೃಹಸಚಿವರಿಗೆ ಗೊತ್ತಿಲ್ಲ, ಗೊತ್ತಿಲ್ಲ. ಇದಕ್ಕಾಗಿಯೇ ಪರಮೇಶ್ವರ್ ಮಗ ಮಗಳಾಗಿ ಪರಿವರ್ತನೆಯಾಗಿದ್ದಾರೆ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.
ಪ್ರಸ್ತುತ ಸಂತೋಷ್ ಕೊಟ್ಯಾನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಚಿಕ್ಕಮಗಳೂರು ನಗರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಕೆಲಕಾಲ ಉದ್ವಿಗ್ನ ಪರಿಸ್ಥಿತಿ
ಬಂಧನದ ವೇಳೆ ಚಿಕ್ಕಮಗಳೂರು ನಗರದಲ್ಲಿರುವ ಮಾರ್ಕೆಟ್ ರಸ್ತೆಯು ಕೆಲ ಕಾಲ ಉದ್ವಿಗ್ನ ವಾತಾವರಣ ಕಂಡಿತು. ಸಂತೋಷ್ ಕೊಟ್ಯಾನ್ ಅವರನ್ನು ಪೊಲೀಸ್ ಜೀಪ್‌ಗೆ ಕರೆದೊಯ್ಯುವ ವೇಳೆ ಬಿಜೆಪಿ ಕಾರ್ಯಕರ್ತರು ಅಡ್ಡಬಂದಿದ್ದು, ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ನೂಕಾಟ ತಳ್ಳಾಟ ನಡೆಯಿತು. ಸಂತೋಷ್ ಬಂಧನ ಖಂಡಿಸಿ ನಗರ ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಠಾಣೆ ಪ್ರದೇಶದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಬಿಜೆಪಿ ಖಂಡನೆ
ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀ ಸಂತೋಷ್ ಕೋಟ್ಯಾನ್ ಅವರ ಮೇಲೆ ದ್ವೇಷ ರಾಜಕಾರಣದಿಂದ FIR ದಾಖಲಿಸಿ, ಯಾವುದೇ ನೋಟಿಸ್ ನೀಡದೆ, ಸುಳ್ಳು ಆರೋಪದಡಿ ಏಕಾಏಕಿ ಬಂಧಿಸಿರುವುದು ಖಂಡನೀಯ ಎಂದು ಬಿಜೆಪಿ ನಾಯಕ ಎನ್ ರವಿ ಕುಮಾರ್ ಆರೋಪಿಸಿದ್ದಾರೆ.
ನೊಟೀಸ್ ನೀಡದೇ ಬಂಧನ ಯಾವ ನ್ಯಾಯ?
ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೊಟ್ಯಾನ್ರ ಖಂಡಿಸಿ ರಸ್ತೆ ತಡೆ ನಡೆಸಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಂತೋಷ್ ರನ್ನು ಬಿಡುಗಡೆಗೊಳಿಸಲು ಆಗ್ರಹಿಸಿದರು. ನೊಟೀಸ್ ನೀಡದೆ ಏಕಾಏಕಿ ಬಂಧನ ಮಾಡಿರುವ ಪೊಲೀಸರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು. ಸಂತೋಷ್ ಕೊಟ್ಯಾನ್ ಅವರನ್ನು ತಕ್ಷಣವೇ ಹೊರಗಡೆ ಕಳಿಸುವಂತೆ ಪಟ್ಟು ಹಿಡಿದ ಕಾರ್ಯಕರ್ತರು, ಘೋಷಣೆ ಕೂಗುತ್ತಾ, ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


