

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಸ್ವಚ್ಛತೆಗಾಗಿ 46 ಕಸ ಗುಡಿಸುವ ಯಂತ್ರಗಳನ್ನು ಏಳು ವರ್ಷಗಳ ಅವಧಿಗೆ ಬಾಡಿಗೆಗೆ ಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಸ್ವಚ್ಛತೆಗಾಗಿ 46 ಕಸಗುಡಿಸುವ ಯಂತ್ರಗಳನ್ನು ಏಳು ವರ್ಷಗಳ ಅವಧಿಗೆ ಬಾಡಿಗೆ ಆಧಾರದ ಮೇಲೆ ಒಟ್ಟು ರೂ.613.25 ಕೋಟಿಗಳ ಅಂದಾಜು ಮೊತ್ತದಲ್ಲಿ ಪಡೆಯಲು ಸಂಪುಟ ಆಡಳಿತಾತ್ಮಕ ಅನುಮೋದನೆ ಎಂದರು.
ಇನ್ನು ಬೆಳಗಾವಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ ಸಂಗ್ರಹವಾಗುವ 150 ಟನ್‌ಗಳಷ್ಟು ಹಸಿ ತ್ಯಾಜ್ಯವನ್ನು Compressed Bio Gas(CBG) ಘಟಕದ ಮೂಲಕ ಸಂಸ್ಕರಿಸಲು Gas Authority of India Limited (GAIL) ತುರುಮುರಿ ತ್ಯಾಜ್ಯ ನಿರ್ವಹಣೆ ಪ್ರದೇಶದಲ್ಲಿ 10 ಎಕರೆ ಜಾಗವನ್ನು 25 ವರ್ಷಗಳ ಅವಧಿಗೆ ಲೀಸ್ ಆಧಾರದ ಮೇಲೆ ವಹಿಸಿಕೊಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮಾನಿಟರಿಂಗ್, ನಿಯಂತ್ರಣ ಮತ್ತು ಮೇಲ್ವಿಚಾರಣೆಗಾಗಿ 12003 ಮೀನುಗಾರಿಕಾ ದೋಣಿಗಳಿಗೆ ರೂ.43.69 ಕೋಟಿಗಳ ವೆಚ್ಚದಲ್ಲಿ (ಕೇಂದ್ರ: ರೂ.26.21 ಕೋಟಿಗಳು, ರಾಜ್ಯ: ರೂ.17.48 ಕೋಟಿಗಳು) ದ್ವಿಮುಖ ಸಂಪರ್ಕ ಸಾಧನಗಳನ್ನು ಅಳವಡಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಮೈಸೂರಿನಲ್ಲಿ ಶಾಸಕ/ಸಂಸದರ ಭವನ
ಮೈಸೂರು ನಗರದಲ್ಲಿರುವ ಸರ್ಕಾರಿ ಅತಿಥಿ ಗೃಹದ ನೌಕರರ ವಸತಿ ಗೃಹಗಳ ಆವರಣದಲ್ಲಿ ಶಾಸಕರ ಹಾಗೂ ಸಂಸದರ ಭವನವನ್ನು ಅಂದಾಜು 15 ಕೋಟಿ ರೂ.ಗಳ ಮೊತ್ತದಲ್ಲಿ ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಸಿಎಂ, ಡಿಸಿಎಂಗೆ ಅಭಿನಂದನೆ
ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಸಚಿವ ಸಂಪುಟ ಸಭೆ ಸ್ವಾಗತಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದೆ.
"ಮೇಕೆದಾಟು ರಾಜಕೀಯ ಹಾಗೂ ಕಾನೂನಾತ್ಮಕ ಹೋರಾಟದ ಹಿನ್ನೆಲೆಯಲ್ಲಿ ತಮಿಳುನಾಡು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ಅರ್ಜಿ ವಜಾ ಆಗಿದೆ. ಹೀಗಾಗಿ ಯೋಜನೆಗೆ ಮುಂದಿನ ಹೆಜ್ಜೆ ಇಡಲು ಹಸಿರು ನಿಶಾನೆ ಸಿಕ್ಕಿದೆ. ಮೇಕೆ ದಾಟು ರಾಜಕೀಯ ಹಾಗೂ ಕಾನೂನಾತ್ಮಕ ಹೋರಾಟ ನಡೆಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಕ್ಯಾಬಿನೆಟ್ ಅಭಿನಂದನೆ ಸಲ್ಲಿಸಿದೆ" ಎಂದು ಎಚ್.ಕೆ.ಪಾಟೀಲ್ ಅವರು ತಿಳಿಸಿದರು.
Advertisement