
ಮೇಕೆದಾಟು ಯೋಜನೆ ವಿವಾದದಲ್ಲಿ ಪ್ರವೇಶಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ನೀರಿನ ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ಉದ್ದೇಶಕ್ಕಾಗಿ ರಚಿಸಲಾದ ತಜ್ಞರ ಸಮಿತಿ ನಿರ್ವಹಿಸುವುದು ಉತ್ತಮ ಎಂದು ಹೇಳಿದೆ. ಕರ್ನಾಟಕದ ಮೇಕೆದಾಟು ಅಣೆಕಟ್ಟಿನ ವಿವರವಾದ ಯೋಜನಾ ವರದಿ (DPR) ನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಇತ್ತೀಚೆಗೆ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಅನುಮೋದನೆಗಳು ನ್ಯಾಯಾಂಗದಿಂದ ಬರಬೇಕಿರುವುದು ಅಲ್ಲ. ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಬರಬೇಕು ಎಂದು ಹೇಳಿದೆ. ಕರ್ನಾಟಕವು ಸಿಡಬ್ಲ್ಯುಸಿ ಅಥವಾ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಪಾಲಿಸಲು ವಿಫಲವಾದರೆ, ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಒಳಗಾಗುವ ಅಪಾಯವಿದೆ ಎಂದು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದೆ. ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದನ್ನು ಕರ್ನಾಟಕ ಸಚಿವ ಸಂಪುಟ ಗುರುವಾರ ಸ್ವಾಗತಿಸಿದೆ.
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡಲಾಗಿದೆ. ಪಥಸಂಚಲನಕ್ಕೆ ಅನುಮತಿ ನೀಡಿರುವ ಬಗ್ಗೆ ಹೈಕೋರ್ಟ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದ್ದು, ನ.16ರ ಮಧ್ಯಾಹ್ನ 3.30ರಿಂದ ಸೂರ್ಯಾಸ್ತದವರೆಗೆ ಅವಕಾಶ ನೀಡಲಾಗಿದೆ. ಪಥಸಂಚಲನದಲ್ಲಿ 300 ಕಾರ್ಯಕರ್ತರು ಹಾಗೂ 25 ಬ್ಯಾಂಡ್ ವಾದಕರಿಗೆ ಅವಕಾಶ ನೀಡಲಾಗಿದ್ದು, ಒಟ್ಟು 325 ಜನ ಮಾತ್ರ ಭಾಗಿಯಾಗಬೇಕು ಎಂದು ತಿಳಿಸಿದೆ. ಚಿತ್ತಾಪುರದಲ್ಲಿ RSS ಪಥಸಂಚಲನ ವಿಚಾರ ಸಂಬಂಧ ಎರಡು ಬಾರಿ ಶಾಂತಿ ಸಭೆ ನಡೆದಿತ್ತು. ಮೊದಲ ಬಾರಿಗೆ ಅ.28ರಂದು ಜಿಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆದಿತ್ತು.
ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಕುರಿತು ಊಹಾಪೋಹಗಳು ಮೂಡಿರುವ ನಡುವೆಯೇ, ಸಿಎಂ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ತಪ್ಪೇನು? ಎಂದು ಪ್ರಶ್ನಿಸುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅಚ್ಚರಿ ಮೂಡಿಸಿದ್ದಾರೆ. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ ಹಾಲಿ ಮುಖ್ಯಮಂತ್ರಿಯೇ ಮುಖ್ಯಮಂತ್ರಿಯಾಗಿ ಮುಂದುವರಿದರೆ ತಪ್ಪು ಏನು? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಈ ನಡುವೆ ಮಾಜಿ ಸಚಿವ ಕೆಎನ್ ರಾಜಣ್ಣ ಪಕ್ಷಾಂತರದ ಸುಳಿವು ನೀಡಿದ್ದಾರೆ. ಮಧುಗಿರಿಯ ದೊಡ್ಡೇರಿಯಲ್ಲಿ ಜನಸಂಪರ್ಕ ಸಭೆಯಲ್ಲಿ ಮಾತನಾಡಿರುವ ರಾಜಣ್ಣ, 2004ರಲ್ಲಿ ನಾನು ಜೆಡಿಎಸ್ ನಿಂದ ಶಾಸಕನಾಗಿದ್ದಾಗ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಪೂರ್ಣ ವೈಟ್ ವಾಶ್ ಆಗಿತ್ತು. ಮತ್ತೆ ಅಂತಹ ಸಂದರ್ಭ ಬಂದರೂ ಬರಬಹುದು, ನಾನು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎಂದ ಮೇಲೆ ಅಂತಹ ಪರಿಸ್ಥಿತಿ ಬರಲಿಕ್ಕಿಲ್ಲ ಎಂದು ಅಂದುಕೊಳ್ಳೋಣ ಎಂದು ಹೇಳಿದ್ದಾರೆ.
ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಸಂಬಂಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಗುರುವಾರ ನಿರಾಕರಿಸಿದೆ. ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಬಿಎಸ್ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು 'ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ'ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂಐ ಅರುಣ್ ವಿಚಾರಣೆ ನಡೆಸಿದರು. ಪ್ರಕರಣದ ವಿಚಾರಣೆ ವೇಳೆ ಅನಗತ್ಯವಾಗಿ ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ಒತ್ತಾಯಿಸಬಾರದು. ಅವರ ಉಪಸ್ಥಿತಿ ಅಗತ್ಯವಿಲ್ಲದಿದ್ದರೆ, ವಿಚಾರಣೆಗೆ ಹಾಜರಾಗುವುದಕ್ಕೆ ವಿನಾಯಿತಿ ಕೋರಿ ಅವರ ಪರವಾಗಿ ಸಲ್ಲಿಸಲಾದ ಯಾವುದೇ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ವಿದ್ಯಾರ್ಥಿಗಳ ವಿದೇಶ ಪ್ರಯಾಣಕ್ಕಾಗಿ ಮೀಸಲಾದ 1.94 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸದಾಶಿವನಗರ ಪೊಲೀಸರು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಇಬ್ಬರು ಗುತ್ತಿಗೆ ನೌಕರರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಯಶವಂತಪುರ ನಿವಾಸಿ ವಿ. ಸೌಂದರ್ಯ ಹೆಸರಘಟ್ಟದ ಆರ್. ದೀಪಿಕಾಆರೋಪಿಗಳಾಗಿದ್ದು, ಐಐಎಸ್‌ಸಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಹಾಯಕ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ವಂಚನೆಗೆ ಸಹಾಯ ಮಾಡಿದ ಆರೋಪದ ಮೇಲೆ ದೀಪಿಕಾ ಗೆಳೆಯ ಸಚಿನ್ ರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳು ಜೂನ್ 2024 ಮತ್ತು ಅಕ್ಟೋಬರ್ 2025 ರ ನಡುವೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ವಂಚಿಸಿದ್ದಾರೆ. ನಕಲಿ ಅನುಮೋದನೆ ಪತ್ರಗಳನ್ನು ಬಳಸಿ, ಅವರು ಅರ್ಹ ವಿದ್ಯಾರ್ಥಿಗಳ ಪ್ರಯಾಣ ಅನುದಾನದ ಮೊತ್ತವನ್ನು ಅವರ ಸಂಬಂಧಿಕರು ಮತ್ತು ನಿಕಟವರ್ತಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.
Advertisement