

ಶತಾಯುಷಿ, 114 ವರ್ಷದ ಸಾಲುಮರದ ತಿಮ್ಮಕ್ಕ ಅಸ್ತಂಗತರಾಗಿದ್ದಾರೆ. ಕರ್ನಾಟಕ ರಾಜ್ಯದುದ್ದಕ್ಕೂ ಸೇರಿದಂತೆ ಭಾರತ ದೇಶದಲ್ಲಿಯೇ ಅವರಿಗೆ ಅಭಿಮಾನಿಗಳಿದ್ದಾರೆ. ಅವರನ್ನು ಪ್ರೀತಿಸುವವರು ಸಹಸ್ರಾರು ಸಂಖ್ಯೆಯಲ್ಲಿದ್ದಾರೆ.
ನಿನ್ನೆ ಅವರು ನಿಧನರಾದ ನಂತರ ಸಂತಾಪ ಸೂಚಿಸಿದ ಸರ್ಕಾರ ಸಕಲ ಗೌರವಗಳೊಂದಿಗೆ ಇಂದು ಶನಿವಾರ ಅಂತ್ಯಕ್ರಿಯೆ ನೆರವೇರಿಸುವುದಾಗಿ ಘೋಷಿಸಿತ್ತು. ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಸುದ್ದಿ ಹಬ್ಬಿ ನಂತರ ಅದು ವದಂತಿ ಎಂದು ಗೊತ್ತಾಯಿತು. ನಂತರ ಅವರ ಅಂತ್ಯಕ್ರಿಯೆಯ ಬಗ್ಗೆ ಗೊಂದಲವುಂಟಾಯಿತು. ಅದಕ್ಕೂ ಸರ್ಕಾರ ತೆರೆ ಎಳೆದಿದೆ.
ಶತಾಯುಷಿ ಸಾಲುಮರದ ತಿಮ್ಮಕ್ಕ ಅವರ ಅಂತಿಮ ದರ್ಶನಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನಲ್ಲಿರುವ ಹುಲಿಕಲ್ ಗ್ರಾಮದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಹಾಸನದ ಬೇಲೂರಿನಲ್ಲಿ 1 ಗಂಟೆ ಕಾಲ ಅಂತಿಮ ದರ್ಶನಕ್ಕೆ ಇಡಲಾಯ್ತು. ಬೇಲೂರಿನ ಮೂಲಕ ಬೆಂಗಳೂರಿಗೆ ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರಕ್ಕೆ ಕರೆತರಲಾಗಿದೆ.
ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ
ಇಂದು ಮಧ್ಯಾಹ್ನದವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಮಧ್ಯಾಹ್ನ ಜ್ಞಾನಭಾರತಿ ಕ್ಯಾಂಪಸ್ನ ಕಲಾಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈ ವೇಳೆ ಸಿಎಂ, ಡಿಸಿಎಂ ಭಾಗಿಯಾಗಲಿದ್ದಾರೆ.
ತಿಮ್ಮಕ್ಕ ದಂಪತಿ ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಅಪ್ರತಿಮ ಪರಿಸರವಾದಿ. ಒಟ್ಟಾರೆ, ವೃಕ್ಷಮಾತೆಯನ್ನು ಕಳೆದುಕೊಂಡು ಪರಿಸರ ಲೋಕ ಇಂದು ಅನಾಥವಾಗಿದೆ. ಸಾಲು ಮರದ ತಿಮ್ಮಕ್ಕರಿಗೆ ಯಾವುದೇ ನಿರೀಕ್ಷೆ ಇಲ್ಲದಿದ್ದರೂ ಸಿಕ್ಕ ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲ.
Advertisement