

ಮಂಡ್ಯ: 786 ಇ-ಖಾತಾ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ(ಇಒ) ಗುರುವಾರ ಇಂಡುವಾಳು ಗ್ರಾಮ ಪಂಚಾಯತ್‌ನಲ್ಲಿ ಕೆಲಸ ಮಾಡಿದ ಹಲವಾರು ಅಧಿಕಾರಿಗಳಿಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ನವೆಂಬರ್ 20 ರೊಳಗೆ 786 ಇ-ಖಾತಾ ಫೈಲ್‌ಗಳನ್ನು ಪತ್ತೆಹಚ್ಚಲು ವಿಫಲವಾದರೆ ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ(ಕೆಎಸ್‌ಪಿಆರ್‌ಎ) 2010 ರ ಸೆಕ್ಷನ್ 9 ರ ಅಡಿಯಲ್ಲಿ ನಿಮ್ಮ ವಿರುದ್ಧ ದೂರು ದಾಖಲಿಸಲಾಗುವುದು ಎಂದು ನೋಟಿಸ್ ನಲ್ಲಿ ಎಚ್ಚರಿಸಲಾಗಿದೆ.
"ಮಂಡ್ಯದಲ್ಲಿ 1,281 ಇ-ಖಾತಾ ಫೈಲ್‌ಗಳು ಕಾಣೆಯಾಗಿವೆ" ಎಂಬ ಸುದ್ದಿಯನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಟಿಸಿದ ಒಂದು ದಿನದ ನಂತರ ಈ ಶೋ-ಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಅವರಿಗೆ ಕಾಣೆಯಾದ ಪ್ರಮುಖ ಇ-ಖಾತಾ ಫೈಲ್‌ಗಳಿಗೆ ಹೊಣೆಗಾರಿಕೆಯನ್ನು ನಿಗದಿಪಡಿಸುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನಗಳ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ದಯಾನಂದ ಮತ್ತು ಕಾರ್ಯದರ್ಶಿ ರಾಣಿ ಎಚ್ ಆರ್ ಅವರು ಏಪ್ರಿಲ್ 1, 2021 ರಿಂದ ಫೆಬ್ರವರಿ 1, 2022 ರವರೆಗೆ ಕೆಲಸ ಮಾಡಿದ್ದಾರೆ ಮತ್ತು ಒಟ್ಟು 229 ಇ-ಖಾತಾ ವಹಿವಾಟುಗಳನ್ನು ನಡೆಸಲಾಗಿದೆ ಮತ್ತು ಕೇವಲ 78 ಫೈಲ್‌ಗಳು ಮಾತ್ರ ಲಭ್ಯವಿದೆ ಎಂದು ಇಒ ಶೋಕಾಸ್ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 2, 2022 ರಿಂದ ಮೇ 7, 2022 ರವರೆಗೆ, ಪಿಡಿಒ ಎ ಎಸ್ ಸಿದ್ದರಾಜು, ಕಾರ್ಯದರ್ಶಿಗಳಾದ ದಯಾನಂದ, ಬಿ ವಿ ಸೋಮು ಮತ್ತು ಎರಡನೇ ವಿಭಾಗದ ಸಹಾಯಕ ರಾಣಿ ಎಚ್ ಆರ್ ಕೆಲಸ ಮಾಡಿದ್ದಾರೆ. ಈ ವೇಳೆ 238 ಇ-ಖಾತಾ ಮಾಡಲಾಗಿದೆ. ಅದರಲ್ಲಿ ಕೇವಲ 113 ಇ-ಖಾತಾ ಫೈಲ್‌ಗಳು ಮಾತ್ರ ಲಭ್ಯವಿವೆ.
ಅಕ್ಟೋಬರ್ 21, 2022 ರಿಂದ ಆಗಸ್ಟ್ 1, 2023 ರವರೆಗೆ, ಪಿಡಿಒ ವಿಶಾಲ್ ಮೂರ್ತಿ ಎಚ್ ಬಿ, ಕಾರ್ಯದರ್ಶಿ ಬಿ ವಿ ಸೋಮು ಮತ್ತು ಎಸ್‌ಡಿಎ ರಾಣಿ ಕೆಲಸ ಮಾಡುತ್ತಿದ್ದರು. ಈ ವೇಳೆ ಒಟ್ಟು 264 ಇ-ಖಾತಾಗಳಲ್ಲಿ ಕೇವಲ 162 ಮಾತ್ರ ಲಭ್ಯವಿದ್ದು, ಉಳಿದವುಗಳನ್ನು ಪತ್ತೆಹಚ್ಚಲಾಗಿಲ್ಲ. ಕೊನೆಯದಾಗಿ, ಆಗಸ್ಟ್ 2, 2023 ಮತ್ತು ಮೇ 25, 2025 ರ ನಡುವೆ, ಪಿಡಿಒ ಕೆ ಸಿ ಯೋಗೇಶ್, ಕಾರ್ಯದರ್ಶಿ ಮರಿಲಿಂಗಯ್ಯ ಮತ್ತು ಎಸ್‌ಡಿಎ ರಾಣಿ ಎಚ್ ಆರ್ ಕೆಲಸ ಮಾಡುತ್ತಿದ್ದರು. ಈ ವೇಳೆ 1,174 ಇ-ಖಾತಾಗಳಲ್ಲಿ ಕೇವಲ 766 ಮಾತ್ರ ಲಭ್ಯವಿದೆ.
Advertisement