

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.
ಇಂದು ಸಂಜೆ ಪ್ರಧಾನಿ ಮೋದಿ ಭೇಟಿ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ, ಕಬ್ಬು ಬೆಲೆ ನಿಗದಿ, 2,100 ಕೋಟಿ ರೂ.ಗಳಿಗೂ ಹೆಚ್ಚು ಪ್ರವಾಹ ಪರಿಹಾರ ಬಿಡುಗಡೆ ಮತ್ತು ನಿರ್ಣಾಯಕ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಅನುಮೋದನೆ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಿದ್ದೇನೆ. ರಾಯಚೂರು ಜಿಲ್ಲೆಯು ಆರೋಗ್ಯ ರಕ್ಷಣೆ, ಶಿಕ್ಷಣ ಹಾಗೂ ತಲಾ ಆದಾಯದ ಮಟ್ಟದಲ್ಲಿ ಆರಂಭಿಕ ಹಂತದಲ್ಲಿದೆ. ದಲಿತರು ಹಾಗೂ ಹಿಂದುಳಿದ ವರ್ಗಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯ ಜನರಿಗೆ ಗುಣಮಟ್ಟದ ರೆಫರೆಲ್ ವೈದ್ಯಕೀಯ ಕೇಂದ್ರದ ಅಗತ್ಯತೆಯನ್ನು ಪೂರೈಸಲು ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಅನುಮೋದನೆಯನ್ನು ನೀಡುವಂತೆ ಮನವಿಪತ್ರದಲ್ಲಿ ಕೋರಲಾಗಿದೆ ಎಂದರು.
ಕರ್ನಾಟಕ ಸರ್ಕಾರವು ರಾಯಚೂರಿನಲ್ಲಿ AIIMS ಸ್ಥಾಪನೆಗೆ ಅನುಮೋದನೆ ಕೋರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ವಿವರವಾದ ಯೋಜನಾ ವರದಿಯನ್ನು ಈಗಾಗಲೇ ಸಲ್ಲಿಸಿದೆ. ಯೋಜನೆಗೆ ಅವಶ್ಯವಾದ ಭೂಮಿಯ ಲಭ್ಯತೆ, ಸಂಪರ್ಕ ವ್ಯವಸ್ಥೆ ಮತ್ತು ಸ್ಥಳೀಯ ಆಡಳಿತದ ಬೆಂಬಲ ಸೇರಿದಂತೆ AIIMS ನಂತಹ ರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.
ಪ್ರವಾಹ ಪರಿಹಾರಕ್ಕೆ ಮನವಿ
ರಾಜ್ಯದಲ್ಲಿ ಒಟ್ಟು 14,58,000 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಆ ಕುರಿತು ನಾವು ಜಂಟಿ ಸಮೀಕ್ಷೆ ಮಾಡಿಸಿದ್ದೇವೆ. ರಾಜ್ಯದಲ್ಲಿ ಒಟ್ಟು 3,560 ಕೋಟಿ ನಷ್ಟವಾಗಿದ್ದು, ಮಳೆಯಿಂದಾಗಿ ಮೂಲಸೌಕರ್ಯಗಳಿಗೂ ಹಾನಿಯಾಗಿರುವ ಬಗ್ಗೆ ಪ್ರಧಾನಮಂತ್ರಿಯವರಿಗೆ ಮನವರಿಕೆ ಮಾಡಿದ್ದೇವೆ. ಇದಲ್ಲದೇ ಸಾವಿರಾರ ಮನೆಗಳು, ರಸ್ತೆ ಹಾಗೂ ಶಾಲೆ ಗಳು ಹಾನಿಗೀಡಾಗಿದ್ದು ಎನ್.ಡಿ.ಆರ್ ಎಫ್ ವತಿಯಿಂದ ಪರಿಹಾರವನ್ನು ಕೋರಿ ಎರಡು ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ 2,136 ಕೋಟಿ ರೂ.ಗಳ ಪರಿಹಾರ ಬಿಡುಗಡೆ ಮಾಡಬೇಕು ಎಂದು ಸಿಎಂ ಆಗ್ರಹಿಸಿದರು.
ಪ್ರಮುಖ ನೀರಾವರಿ ಯೋಜನೆಗಳು
ರಾಜ್ಯದ ಪ್ರಮುಖ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರದಿಂದ ಬಾಕಿ ಇರುವ ತೀರುವಳಿಗಳನ್ನು ದೊರಕಿಸಲು ಪ್ರಧಾನಮಂತ್ರಿಗಳು ಮಧ್ಯಪ್ರವೇಶ ಮಾಡಬೇಕು. ಪ್ರಧಾನಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಸಮತೋಲನ ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಬಾಕಿ ಇರುವ ತೀರುವಳಿಗಳನ್ನು ನೀಡುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶಿಸಬೇಕು ಎಂದರು.
ಕಬ್ಬು ಬೆಳೆಗೆ ದರ ನಿಗದಿ
ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆಯೂ ಪ್ರಧಾನಿ ಮೋದಿಯವರಿಗೆ ಮಾಹಿತಿ ನೀಡಲಾಗಿದೆ.ಎಫ್ಆರ್ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಟನ್ಗೆ 3,500 ರೂ. ಕೊಡಬೇಕು ಎಂದು ರೈತರ ಬೇಡಿಕೆ ಇದ್ದು, ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳಿವೆ. ರೈತ ಮುಖಂಡರು, ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ ಪ್ರತಿ ಟನ್ ಕಬ್ಬಿಗೆ 3,300 ರೂ. ನಿಗದಿ ಮಾಡಿದ್ದೆವು. ಸರ್ಕಾರದ ದರ ಒಪ್ಪಿಕೊಂಡು ರೈತರು ಪ್ರತಿಭಟನೆ ಹಿಂಪಡೆದರು. ಆದರೆ, ಸಕ್ಕರೆಗೆ ದರ ನಿಗದಿ ಮಾಡುವುದು ಸಹ ಕೇಂದ್ರ ಸರ್ಕಾರ. ಕೆಜಿ ಸಕ್ಕರೆಗೆ 41 ರೂ. ಮಾಡುವಂತೆ ಬೇಡಿಕೆ ಇದ್ದು, ಆ ಬಗ್ಗೆಯೂ ಪ್ರಧಾನಮಂತ್ರಿಗೆ ಮನವಿ ಮಾಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ.
Advertisement