News headlines 17-11-2025| ಪ್ರಧಾನಿ ಮೋದಿ ಭೇಟಿಯಾದ ಸಿದ್ದರಾಮಯ್ಯ; ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ; ಕಡಲೆಕಾಯಿ ಪರಿಷೆಗೆ ಚಾಲನೆ; 2-5 ದಿನಕ್ಕೆ ವಿಸ್ತರಣೆ; ಶೆಲ್ಟರ್ ಗಳಿಗೆ ಬೀದಿ ನಾಯಿಗಳು: ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸುತ್ತೇವೆ: ಬೆಂಗಳೂರು ನಗರ ಆಯುಕ್ತರು

News headlines 17-11-2025| ಪ್ರಧಾನಿ ಮೋದಿ ಭೇಟಿಯಾದ ಸಿದ್ದರಾಮಯ್ಯ; ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ; ಕಡಲೆಕಾಯಿ ಪರಿಷೆಗೆ ಚಾಲನೆ; 2-5 ದಿನಕ್ಕೆ ವಿಸ್ತರಣೆ; ಶೆಲ್ಟರ್ ಗಳಿಗೆ ಬೀದಿ ನಾಯಿಗಳು: ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸುತ್ತೇವೆ: ಬೆಂಗಳೂರು ನಗರ ಆಯುಕ್ತರು

1. ಪ್ರಧಾನಿ ಮೋದಿ ಭೇಟಿಯಾದ ಸಿದ್ದರಾಮಯ್ಯ; ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ

ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಕಬ್ಬು ಬೆಳೆಯುವ ರೈತರು ಎದುರಿಸುತ್ತಿರುವ ಸಮಸ್ಯೆಗಳು ಸೇರಿದಂತೆ ಹಲವಾರು ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಕೇಂದ್ರವು ಟನ್ ಕಬ್ಬಿಗೆ 2024-25 ಮತ್ತು 2025-26ರ FRP ಮತ್ತು ಬೆಲೆಯನ್ನು 3,550 ರೂ. ಗಳಿಗೆ ನಿಗದಿಪಡಿಸಿದೆ. ಈಗ ನಮ್ಮ ರೈತರು ಹೆಚ್ಚಿನ ಬೆಲೆಗೆ ಒತ್ತಾಯಿಸುತ್ತಿದ್ದಾರೆ' 'ಇದರ ಜೊತೆಗೆ, ದರವನ್ನು ಮತ್ತಷ್ಟು ಹೆಚ್ಚಿಸುವಂತೆ ಮುಖ್ಯಮಂತ್ರಿ ಕೇಂದ್ರವನ್ನು ವಿನಂತಿಸಿದ್ದಾರೆ. ಇತರ ರಾಜ್ಯಗಳಲ್ಲಿ, ಸಕ್ಕರೆ ರಿಕವರಿ ಆಧಾರಿತ ಬೆಲೆ ನಿಗದಿಯನ್ನು ಜಾರಿಗೆ ತರಲಾಗಿದೆ. ಅದನ್ನು ಇಲ್ಲಿಯೂ ಜಾರಿಗೆ ತರುವಂತೆ ಸಿಎಂ ಮೋದಿ ಭೇಟಿ ವೇಳೆ ಮನವಿ ಮಾಡಿದ್ದಾರೆ. ಕಬ್ಬಿನ ಸಮಸ್ಯೆಗಳ ಜೊತೆಗೆ ನೀರಾವರಿ ವಿಷಯ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅನುಮತಿ ನೀಡಿರುವ ಬಗ್ಗೆಯೂ ಪ್ರಧಾನಿ ಜೊತೆ ಚರ್ಚೆ ನಡೆಸಿದ್ದಾರೆ.

2. ಕಡಲೆಕಾಯಿ ಪರಿಷೆಗೆ ಚಾಲನೆ; 2-5 ದಿನಕ್ಕೆ ವಿಸ್ತರಣೆ

ಐದು ದಿನಗಳ ಕಾಲ ನಡೆಯಲಿರುವ ಬಸವನಗುಡಿ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಇಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಬಸವನಗುಡಿಯ ದೊಡ್ಡಬಸವಣ್ಣ ದೇವಾಲಯದ ಆವರಣದಲ್ಲಿ ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಹಾಗೂ ಐದು ಎತ್ತುಗಳಿಗೆ ಕಡಲೆಕಾಯಿ ಸೊಪ್ಪು ತಿನ್ನಿಸುವ ಮೂಲಕ ಮುಜರಾಯಿ ಪರಿಷೆಗೆ ಚಾಲನೆ ನೀಡಲಾಯಿತು. ಅನಂತರ ಮಾತನಾಡಿದ ಸಚಿವರು, ಈ ಬಾರಿ ಪ್ಲಾಸ್ಟಿಕ್ ಬಳಸಿದರೆ ಅಂಗಡಿಗಳನ್ನು ಬಂದ್ ಮಾಡಲು ಹೇಳಿದ್ದೇನೆ. ಜೊತೆಗೆ ಈ ಬಾರಿ ಶುಲ್ಕ ರಹಿತ ಅಂಗಡಿಗಳನ್ನು ತೆರೆಯಲು ಅವಕಾಶ ಕೊಟ್ಟಿದ್ದೇವೆ. ಕಳೆದ ವರ್ಷ 4-5 ಲಕ್ಷ ಜನ ಪರಿಷೆಗೆ ಬಂದಿದ್ರು, ಈ ವರ್ಷ ಇನ್ನೂ ಎರಡು ಲಕ್ಷ ಜನ ಹೆಚ್ಚು ಬರೋ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ಪರಿಷೆಯನ್ನು ಇದೇ ಮೊದಲ ಬಾರಿಗೆ 2 ದಿನದಿಂದ 5 ದಿನಗಳಿಗೆ ವಿಸ್ತರಣೆ ಮಾಡಲಾಗಿದೆ.

3. ಮೇಖ್ರಿ ಸರ್ಕಿಲ್ ನಲ್ಲಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ; ಕಾರು ಮೇಲೆ ನಿಂತು ವ್ಯಕ್ತಿಯಿಂದ ಹುಚ್ಚಾಟ

ನಗರದ ಕೇಂದ್ರಭಾಗದಲ್ಲಿರುವ ಹೆಚ್ಚು ವಾಹನ ದಟ್ಟಣೆಯ ಪ್ರದೇಶವಾದ ಮೇಖ್ರಿ ಸರ್ಕಿಲ್ ನಲ್ಲಿ ಇಂದು ದೊಡ್ಡ ಹೈಡ್ರಾಮ ನಡೆದಿದೆ. ಪ್ರಯಾಣಿಕನೊಬ್ಬ ಕ್ಯಾಬ್ ಡ್ರೈವರ್ ಮೇಲೆ ಹಲ್ಲೆ ನಡೆಸಿ ನಡು ರಸ್ತೆಯಲ್ಲಿ ಹುಚ್ಚಾಟ ನಡೆಸಿದ್ದಾನೆ. ಸೂಪರ್ ಮಾರ್ಕೆಟ್‌ನಲ್ಲಿ ಮ್ಯಾನೇಜರ್ ಆಗಿದ್ದ ಸಂತೋಷ್‌ ಬದರಿನಾಥ, ಮೈಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕ್ಯಾಬ್‌ ಬುಕ್‌ ಮಾಡಿದ್ದ. ಮೆಕ್ರಿ ಸರ್ಕಲ್‌ ಬಳಿ ಚಾಲಕನ ಜೊತೆ ಮಾತನಾಡುತ್ತಾ ಜಗಳ ಮಾಡಿದ್ದಾನೆ. ಬಳಿಕ ನಡು ರಸ್ತೆಯಲ್ಲಿ ಕಾರಿನ ಮೇಲೆ ಹತ್ತಿ ಹುಚ್ಚನಂತೆ ವರ್ತಿಸಿದ್ದಾನೆ. ಸ್ಥಳದಲ್ಲಿದ್ದ ಜನರು ಹಾಗೂ ಸಂಚಾರಿ ಪೊಲೀಸರು ಸಮಾಧಾನ ಮಾಡಲು ಮುಂದಾದಾಗ ಅವರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಹುಚ್ಚಾಟ ಜೋರಾಗುತ್ತಿದ್ದಂತೆ ಬೇರೆ ಯಾರ ಮೇಲೂ ಹಲ್ಲೆ ಮಾಡಬಾರದು ಎಂದು ಪೊಲೀಸರು ಕೈ ಕಾಲು ಕಟ್ಟಿ ರಸ್ತೆಯಲ್ಲಿ ಮಲಗಿಸಿದ್ದಾರೆ. ಸಂತೋಷ್‌ ಆರು ತಿಂಗಳಿಂದ ಕೆಲಸ ಕಳೆದುಕೊಂಡು ಮಾನಸಿಕ ಅಸ್ವಸ್ಥನಾಗಿ ವರ್ತಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ದಾಂಪತ್ಯ ಜೀವನದಲ್ಲೂ ಸಮಸ್ಯೆ ಹೊಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

4. ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸಂಖ್ಯೆ 31ಕ್ಕೆ ಏರಿಕೆ

ಬೆಳಗಾವಿಯ ಭೂತರಾಮನಹಟ್ಟಿಯಲ್ಲಿರು ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿದಿದ್ದು, ಮೃಗಾಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನವೆಂಬರ್ 13ರಿಂದ ಆರಂಭವಾದ ಸಾವಿನ ಸಂಖ್ಯೆ ಈಗಾಗಲೇ 31ಕ್ಕೆ ತಲುಪಿದೆ. ಉಳಿದಿರುವ 7 ಕೃಷ್ಣಮೃಗಗಳಿಗೆ ಆರೈಕೆ ಮುಂದುವರೆದಿದೆ. ತಜ್ಞ ಪಶುವೈದ್ಯರ ಸಲಹೆಯ ಮೇರೆಗೆ ತೀವ್ರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೂ ಕಳೆದೆರಡು ದಿನಗಳಲ್ಲಿ ಇನ್ನೂ ಮೂರು ಕೃಷ್ಣಮೃಗಗಳು ಸಾವನ್ನಪ್ಪಿದ್ದು, ಇದು ಆತಂಕ ಮೂಡಿಸಿದೆ. ಕೃಷ್ಣಮೃಗಗಳು ಸಾವನ್ನಪ್ಪಿದ ಬಳಿಕ ತಜ್ಞರ ಶಿಫಾರಸುಗಳ ಪ್ರಕಾರ ಅಗತ್ಯವಿರುವ ಎಲ್ಲಾ ಕ್ರಮಗಳು ಮತ್ತು ಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ ಎಂದು ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ.

5. ಶೆಲ್ಟರ್ ಗಳಿಗೆ ಬೀದಿ ನಾಯಿಗಳು: ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸುತ್ತೇವೆ: ಬೆಂಗಳೂರು ನಗರ ಆಯುಕ್ತರು

"ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಟದ ಮೈದಾನಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ಶೆಲ್ಟರ್ ಗಳಿಗೆ ಸ್ಥಳಾಂತರಿಸುವ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ ಎಲ್ಲಾ ಐದು ನಗರ ನಿಗಮಗಳ ಬೆಂಗಳೂರು ನಗರ ಆಯುಕ್ತರು ಸಂಬಂಧಪಟ್ಟ ಸಂಸ್ಥೆಗಳು ಮತ್ತು ಅಧಿಕಾರಿಗಳಿಗೆ ಬೀದಿ ನಾಯಿಗಳು ಕಂಡುಬರುವ ಸ್ಥಳಗಳನ್ನು ಪಟ್ಟಿ ಮಾಡುವಂತೆ ಪತ್ರ ಬರೆದಿದ್ದಾರೆ. ಇವೆಲ್ಲವೂ ಸರಿಯಾದ ನಂತರ, ನಗರ ನಿಗಮಗಳು ಶೆಲ್ಟರ್ ಗಳ ನಿರ್ಮಾಣವನ್ನು ತ್ವರಿತಗೊಳಿಸುತ್ತವೆ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ನಾಯಿಗಳನ್ನು ಸ್ಥಳಾಂತರಿಸಿ ಇರಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com