

ಬೆಂಗಳೂರು: ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟದ ಬಳಿಕ ಹೈಅಲರ್ಟ್ ಘೋಷಿಸಿದ ನಂತರ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಸಿಬ್ಬಂದಿ ಭಾನುವಾರ ತಡರಾತ್ರಿ ಚಾಕು ದಾಳಿಯನ್ನು ತಪ್ಪಿಸಿದ್ದಾರೆ.
ನವೆಂಬರ್ 16 ರಂದು ರಾತ್ರಿ 11:59ರ ಸುಮಾರಿಗೆ, ಸೊಹೈಲ್ ಅಹ್ಮದ್ ಎಂದು ಗುರುತಿಸಲಾದ ವ್ಯಕ್ತಿ ಟರ್ಮಿನಲ್ 1 ರ ಆಗಮನದ ಲೇನ್ ಬಳಿ ಇಬ್ಬರು ಟ್ಯಾಕ್ಸಿ ಚಾಲಕರ ಮೇಲೆ ದಾಳಿ ನಡೆಸಲು ಮಚ್ಚು ಹಿಡಿದು ಓಡುತ್ತಿರುವುದು ಕಂಡುಬಂದಿದೆ.
"ಘಟನೆಯನ್ನು ಗಮನಿಸಿದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ಮತ್ತು ಕರ್ತವ್ಯದಲ್ಲಿದ್ದ ಇಬ್ಬರು ಸಿಐಎಸ್‌ಎಫ್ ಸಿಬ್ಬಂದಿ, ತಕ್ಷಣ ಮಧ್ಯಪ್ರವೇಶಿಸಿ, ದಾಳಿಕೋರನನ್ನು ತಡೆದು, ಸಾರ್ವಜನಿಕರಿಗೆ ಯಾವುದೇ ಹಾನಿಯಾಗದಂತೆ ಮಚ್ಚನ್ನು ಆರೋಪಿಯಿಂದ ಸುರಕ್ಷಿತವಾಗಿ ಕಿತ್ತುಕೊಂಡರು" ಎಂದು ಮೂಲಗಳು ಟಿಎನ್‌ಐಇಗೆ ತಿಳಿಸಿವೆ.
ಪ್ರಾಥಮಿಕ ವಿಚಾರಣೆಯಲ್ಲಿ ಅಹ್ಮದ್, ಟ್ಯಾಕ್ಸಿ ಚಾಲಕರಾದ ಜಗದೀಶ್ ಜೆಆರ್ ಹಾಗೂ ರೇಣು ಕುಮಾರ್ ಪರಸ್ಪರ ಪರಿಚಿತರು ಎಂದು ತಿಳಿದುಬಂದಿದೆ.
"ವಿಚಾರಣೆಯ ಸಮಯದಲ್ಲಿ, ಹಿಂದಿನ ರಾತ್ರಿ ಜಗದೀಶ್ ಮತ್ತು ರೇಣು ಕುಮಾರ್ ಇಬ್ಬರು ಚಾಲಕರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಹ್ಮದ್ ಆರೋಪಿಸಿದ್ದು, ಅವರ ಮೇಲೆ ಸೇಡು ತೀರಿಸಿಕೊಳ್ಳಲು ಮಚ್ಚು ಹಿಡಿದು ಆ ಇಬ್ಬರ ಮೇಲೆ ದಾಳಿ ಮಾಡಲು ಬಂದಿದ್ದ" ಎಂದು ಆರೋಪಿಯು CISF ಗೆ ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ಆರೋಪಿಯನ್ನು ಬಂಧಿಸಿದ ಪೊಲೀಸರು, ವಶಪಡಿಸಿಕೊಂಡ ಮಚ್ಚನ್ನು ತಕ್ಷಣವೇ ಮುಂದಿನ ಕಾನೂನು ಕ್ರಮಕ್ಕಾಗಿ KIA ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
Advertisement