

ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ನ. 17ರಂದು ಮಂದಗತಿಯ ರೈಲು ಸಂಚಾರ ಇದ್ದಿದ್ದಕ್ಕೆ ಪ್ರಯಾಣಿಕರು ರೊಚ್ಚಿಗೆದ್ದಿದ್ದಾರೆ. ಹಳದಿ ಮೆಟ್ರೋದಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಮೆಟ್ರೋ ರೈಲು ಶುರುವಾಗುತ್ತದೆ. ಆದರೆ, ಈ ಸೇವೆಯು ಬೆಳಗ್ಗೆ 5 ಗಂಟೆಗೇ ಶುರುವಾಗಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿತ್ತು.
ಆರ್‌ವಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಮೊದಲ ರೈಲಿನ ಸಂಚಾರಕ್ಕೆ ಅಡ್ಡಿ ಮಾಡಿದ್ದರಿಂದ ಸುಮಾರು 30 ನಿಮಿಷಗಳಷ್ಟು ವಿಳಂಬ ಉಂಟಾಗಿದೆ. ಯೆಲ್ಲೋ ಲೈನ್ ಮೆಟ್ರೋ ಕಾರ್ಯಾಚರಣೆ ಬೇಗ ಆರಂಭವಾಗಬೇಕು ಎಂಬ ಪ್ರಯಾಣಿಕರ ಆಕ್ರೋಶದಿಂದ ಈ ವಿಳಂಬ ಉಂಟಾಗಿದೆ ಎನ್ನಲಾಗಿದೆ.
ಬೆಳಿಗ್ಗೆ 6 ಗಂಟೆಗೆ ಹೊರಡಬೇಕಿದ್ದ ರೈಲು 6.35ಕ್ಕೆ ಹೊರಡುವಂತಾಯಿತು. ಇದರಿಂದಾಗಿ ಇಡೀ ಯೆಲ್ಲೋ ಲೈನ್‌ನಾದ್ಯಂತ ದಿನವಿಡೀ ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಯಿತು ಎಂದು ಹೇಳಲಾಗಿದೆ.
ಇನ್ನು ಬಿಎಂಆರ್‌ಸಿಎಲ್ (BMRCL) ಅಧಿಕಾರಿ ಹೇಳುವ ಪ್ರಕಾರ, "ಪ್ರಯಾಣಿಕರ ಗುಂಪೊಂದು ಬಾಗಿಲುಗಳ ನಡುವೆ ನಿಂತು ಸ್ವಯಂಚಾಲಿತವಾಗಿ ಬಾಗಿಲು ಮುಚ್ಚುವುದನ್ನು ತಡೆ ಹಿಡಿದಿದ್ದಕ್ಕೆ ಈ ವಿಳಂಬ ಉಂಟಾಯಿತು ಎಂದು ಹೇಳಿದ್ದಾರೆ.
ಈ ಪ್ರಯಾಣಿಕರ ತಪ್ಪಿನಿಂದ ಆರ್‌ವಿ ರೋಡ್ ಮೆಟ್ರೋ ನಿಲ್ದಾಣದಲ್ಲಿ ಯೆಲ್ಲೋ ಲೈನ್‌ನ ಮೊದಲ ರೈಲು ವಿಳಂಬವಾಗಿ ಹೊರಟಿತು. ಅಂದರೆ ದಿನಂಪ್ರತಿ ಬೆಳಿಗ್ಗೆ 6 ಗಂಟೆಗೆ ಹೊರಡಬೇಕಿದ್ದ ರೈಲು 6.35ಕ್ಕೆ ಹೊರಟಿತು. ಇದರಿಂದ ಮುಂದೆ ಬರುವ ಎಲ್ಲಾ ರೈಲಿನ ಸಮಯದಲ್ಲೂ ವ್ಯತ್ಯಾಸ ಉಂಟಾಗಲು ಕಾರಣವಾಯಿತು.
ಮೆಟ್ರೋ ರೈಲ್ವೆ ಕಾಯಿದೆ, 2002 ರ ಪ್ರಕಾರ, ಮೆಟ್ರೋ ಸೇವೆಗೆ ಇಂತಹ ಅಡ್ಡಿಪಡಿಸುವವರಿಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ನವೆಂಬರ್ 1 ರಿಂದ 5 ನೇ ರೈಲನ್ನು ಪರಿಚಯಿಸಲಾಗಿದೆ. ಈ ಹಿಂದೆ ರೈಲು 6.30 ಕ್ಕೆ ಯೆಲ್ಲೋ ಲೈನ್ ಮೆಟ್ರೋ ಕಾರ್ಯಾಚರಣೆ ಆರಂಭವಾಗುತ್ತಿತ್ತು. ಆದ್ರೆ ಇದೀಗ ಐದನೇ ರೈಲು ಬಂದ ನಂತರ 6 ಗಂಟೆಗೆ ಕಾರ್ಯಾಚರಣೆ ಆರಂಭಿಸಿದೆ. ಅಲ್ಲದೇ ರೈಲುಗಳ ಅಂತರ 19 ನಿಮಿಷಗಳಿಂದ 15 ನಿಮಿಷಗಳಿಗೆ ಸುಧಾರಿಸಲಾಗಿದೆ. ಆದರೆ ಮುಂಬರುವ ತಿಂಗಳಲ್ಲಿ ಮತ್ತಷ್ಟು ರೈಲನ್ನು ಪರಿಚಯಿಸಲಾಗುತ್ತದೆ ಎನ್ನಲಾಗಿದ್ದು, ಇದರಿಂದ ರೈಲುಗಳ ಕಾರ್ಯಾಚರಣೆಯೂ ವೇಗ ಪಡೆಯಲಿದೆ ಎನ್ನಲಾಗಿದೆ.
Advertisement