News headlines 20-11-2025| ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ 5 ವರ್ಷ ನಾನೇ ಸಿಎಂ-ಸಿದ್ದರಾಮಯ್ಯ; ಡಿಕೆ ಶಿವಕುಮಾರ್ ಆಪ್ತರು ದಿಢೀರ್ ದೆಹಲಿಗೆ ಪ್ರಯಾಣ; ATM ವಾಹನ ದರೋಡೆ ಕೇಸ್: ತಿರುಪತಿಯಲ್ಲಿ ಇಬ್ಬರ ಬಂಧನ; ಧರ್ಮಸ್ಥಳ ಪ್ರಕರಣ: ಕೋರ್ಟ್ ಗೆ SIT ತನಿಖಾ ವರದಿ ಸಲ್ಲಿಕೆ

News headlines
ಸುದ್ದಿ ಮುಖ್ಯಾಂಶಗಳುonline desk

1. ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ 5 ವರ್ಷ ನಾನೇ ಸಿಎಂ-ಸಿದ್ದರಾಮಯ್ಯ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು 2.6 ವರ್ಷಗಳು ಪೂರ್ಣಗೊಂಡಿದ್ದು, ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ಸಿದ್ದರಾಮಯ್ಯಗೂ ಜವಾಬ್ದಾರಿ ಇದೆ. ಸಿದ್ದರಾಮಯ್ಯ ಯಾರಿಗೂ ಕೊಟ್ಟ ಮಾತಿಗೆ ತಪ್ಪಿಲ್ಲ. ಹಿಂದಿನ ಸರ್ಕಾರದಲ್ಲಿ ಕೂಡ ಮಾತಿನ ಪ್ರಕಾರವೇ ನಡೆದಿದ್ದಾರೆ. ಈಗಿನ ಸರ್ಕಾರದಲ್ಲೂ ಕೊಟ್ಟ ಮಾತಿನ ಪ್ರಕಾರವೇ ನಡೆದುಕೊಳ್ಳುತ್ತಾರೆ ಎಂದು ಮಾರ್ಮಿಕ ಹೇಳಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ನವೆಂಬರ್ ಕ್ರಾಂತಿ'ಯ ವರದಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಕೇವಲ "ಮಾಧ್ಯಮ ಸೃಷ್ಟಿ" ಎಂದು ಹೇಳಿದ್ದಾರೆ. ನನ್ನ ಸ್ಥಾನ ಮೊದಲಿನಿಂದಲೂ ಗಟ್ಟಿಯಾಗಿದೆ. ಈಗಲೂ ಗಟ್ಟಿಯಾಗಿದೆ ಮತ್ತು ಭವಿಷ್ಯದಲ್ಲಿಯೂ ಹಾಗೆಯೇ ಮುಂದುವರಿಯುತ್ತದೆ ಎಂದು ಸಿಎಂ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಎರಡೂವರೆ ವರ್ಷ ಆದಮೇಲೆ ಸಂಪುಟ ಪುನಾರಚನೆ ಮಾಡೋಣ ಅಂದಿದ್ದೆ, ಆ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. ಮತ್ತೆ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ಈ ಮಧ್ಯೆ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಆಪ್ತ ಸಚಿವರು ಮತ್ತು ಕೆಲವು ಶಾಸಕರು ನವದೆಹಲಿಗೆ ತೆರಳಿದ್ದು ಕುತೂಹಲ ಮೂಡಿಸಿದೆ. ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ನಡೆಯುತ್ತಿರುವುದನ್ನು ಈ ಬೆಳವಣಿಗೆ ಸ್ಪಷ್ಟಪಡಿಸಿದೆ.

2. ATM ವಾಹನ ದರೋಡೆ ಕೇಸ್: ತಿರುಪತಿಯಲ್ಲಿ ಇಬ್ಬರ ಬಂಧನ

ಎಟಿಎಂಗಳಿಗೆ ಹಣ ತುಂಬುವ ವಾಹನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ತಿರುಪತಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯಗಳನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು, ದರೋಡೆಗೆ ಬಳಸಿದ್ದ ಇನ್ನೋವಾ ಕಾರನ್ನು ಆಂಧ್ರಪ್ರದೇಶದ ಚಿತ್ತೂರು ಬಳಿ ವಶಕ್ಕೆ ಪಡೆದಿದ್ದಾರೆ. ದರೋಡೆಯ ವೇಳೆ ಕರ್ನಾಟಕ ನೋಂದಣಿ ನಂಬರ್ ಪ್ಲೇಟ್‌ ಹಾಕಿದ್ದ ಆರೋಪಿಗಳು, ಪರಾರಿಯಾದ ಬಳಿಕ ಯುಪಿ ನೋಂದಣಿಯ ನಂಬರ್ ಪ್ಲೇಟ್ ಹಾಕಿಕೊಂಡು ಓಡಾಡುತ್ತಿದ್ದರು. ಎಟಿಎಂ ಕೇಂದ್ರಕ್ಕೆ ಹಣ ತುಂಬಲು ಹೊರಟಿದ್ದ ಸಿಎಂಎಸ್ ಏಜೆನ್ಸಿ ವಾಹನವನ್ನು ಆದಾಯ ತೆರಿಗೆ ಇಲಾಖೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ, ₹7.11 ಕೋಟಿ ದರೋಡೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು.

3. ಧರ್ಮಸ್ಥಳ ಪ್ರಕರಣ: ಕೋರ್ಟ್ ಗೆ SIT ತನಿಖಾ ವರದಿ ಸಲ್ಲಿಕೆ

ಧರ್ಮಸ್ಥಳ ತಲೆಬುರುಡೆ ಕೇಸ್ ಮತ್ತೊಂದು ಹಂತಕ್ಕೆ ತಲುಪಿದೆ. ಸುಮಾರು 3 ತಿಂಗಳುಗಳಿಂದ ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಬೆಳ್ತಂಗಡಿ ಕೋರ್ಟ್‌ಗೆ ಸುಮಾರು 4000 ಪುಟಗಳ ತನಿಖಾ ವರದಿ ಸಲ್ಲಿಸಿದೆ. ಈ ತನಿಖಾ ವರದಿಯಲ್ಲಿ ಅನೇಕ ಸ್ಫೋಟಕ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಬುರುಡೆ ಮ್ಯಾನ್ ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸುಜಾತಾ ಭಟ್ ಸೇರಿ ಒಟ್ಟು 6 ಮಂದಿ ಹೆಸರನ್ನು ಉಲ್ಲೇಖಿಸಲಾಗಿದೆ. BNSS 215ರ ಅಡಿಯಲ್ಲಿ ಸುಳ್ಳು ಸಾಕ್ಷ್ಯದ ಕುರಿತ ಪ್ರಕರಣದ ತನಿಖಾ ವರದಿ ಇದಾಗಿದ್ದು, ಸುಮಾರು 4 ಸಾವಿರ ಪುಟಗಳನ್ನು ಒಳಗೊಂಡಿದೆ. ಎಸ್‌ಐಟಿ ವರದಿಯಲ್ಲಿ ಧರ್ಮಸ್ಥಳ ವಿರುದ್ಧದ ಷಡ್ಯಂತ್ರದ ವಿಚಾರವಾಗಿಯೂ ಉಲ್ಲೇಖಿಸಲಾಗಿದೆ. ತಿಮರೋಡಿ ಚಿನ್ನಯ್ಯನ ಸಂಪರ್ಕದ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

4. ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು; ತನಿಖೆಗೆ ಆದೇಶ

ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸಿದ ಕೆಲವೇ ಕ್ಷಣಗಳಲ್ಲಿ ನೆಲಕ್ಕೆ ಬಿದ್ದು ನವಜಾತ ಶಿಶು ಸಾವನ್ನಪ್ಪಿದ್ದು, ಈ ಘಟನೆಯ ಬಗ್ಗೆ ಜಿಲ್ಲಾ ಸರ್ಜನ್ ತನಿಖೆಗೆ ಆದೇಶಿಸಿದ್ದಾರೆ. ರಾಣೆಬೆನ್ನೂರು ಬಳಿಯ ಕಾಕೋಲ್ ಗ್ರಾಮದ 30 ವರ್ಷದ ರೂಪಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹೆರಿಗೆ ವಾರ್ಡ್ ಹೊರಗೆ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯ ಕುಟುಂಬದ ಪ್ರಕಾರ, ತೀವ್ರ ಹೆರಿಗೆ ನೋವು ಇದ್ದರೂ, ಪ್ರಸೂತಿ ಮತ್ತು ಸ್ತ್ರೀರೋಗ ವಾರ್ಡ್ ತುಂಬಿದ್ದರಿಂದ ಅವರನ್ನು ದಾಖಲಿಸಲಾಗಿಲ್ಲ. ಹೆರಿಗೆ ಕೊಠಡಿ ತುಂಬಿತ್ತು ಮತ್ತು ಹಾಸಿಗೆಗಳು ಲಭ್ಯವಿರಲಿಲ್ಲ. ಹೀಗಾಗಿ ವಾರ್ಡ್ ಹೊರಗೆ ನೆಲದ ಮೇಲೆ ಕೂರಿಸಲಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

5. ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟವರಿಗೆ 5 ಲಕ್ಷ ರೂಪಾಯಿ ಪರಿಹಾರ

ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಾಯಗೊಂಡವರಿಗೆ ಐದು ಸಾವಿರ ರೂ. ಹಾಗೂ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಾಯಗೊಂಡವರಿಗೆ ನೀಡುವ ಪರಿಹಾರ ಹಣದಲ್ಲಿ ಚಿಕಿತ್ಸೆ ವೆಚ್ಚವಾಗಿ 1,500 ರೂ. ಹಾಗೂ ಗಾಯಗೊಂಡ ಸಂತ್ರಸ್ತರಿಗೆ 3,500 ರೂ. ಪಾವತಿಯಾಗಲಿದೆ. ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟವರಿಗೆ ಅಥವಾ ರೇಬೀಸ್‌ನಿಂದ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com