

ನವದೆಹಲಿ: ಮುಸ್ಲಿಂ ಸಮುದಾಯ ಭವನಗಳಿಗಾಗಿ ರಾಜ್ಯ ಸರ್ಕಾರ ರೂ. 67 ಕೋಟಿ ಮಂಜೂರು ಮಾಡಿರುವ ಬಗ್ಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಓಲೈಕೆ ರಾಜಕಾರಣ ಮತ್ತು ತುಷ್ಟೀಕರಣಕ್ಕೆ ಸ್ವಲ್ಪ ಮಿತಿಯಿರಬೇಕು ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರದ ಖಜಾನೆಯನ್ನು ಕೇವಲ ಒಂದೇ ಸಮುದಾಯಕ್ಕೆ ವಿನಿಯೋಗಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ.
ಮುಸ್ಲಿಂರಿಗೆ ಉದಾರಿ ಈ ಸಿಎಂ: ರಾಜ್ಯದ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಲ್ಪಸಂಖ್ಯಾತರ ವಿಷಯದಲ್ಲಿ ಮಾತ್ರ ಅತೀ ಉದಾರಿಯಾಗಿದ್ದಾರೆ. ರೈತರಿಗೆ ಪರಿಹಾರ ನೀಡಲು ಹಿಂದೆಮುಂದೆ ನೋಡುತ್ತಾರೆ. ನೌಕರರ ಸರಿಯಾಗಿ ಸಕಾಲಕ್ಕೆ ಸಂಬಳ ಕೊಡಲು ಹಣವಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖರೀದಿಗೆ ಹಣವಿಲ್ಲ, ಹದಗೆಟ್ಟ ರಸ್ತೆಗಳಲ್ಲಿ ಗುಂಡಿ ಮುಚ್ಚಲು ಸಹ ಹಣವಿಲ್ಲ ಎನ್ನುವ ಸರ್ಕಾರ ಮುಸ್ಲಿಂ ಅಂದರೆ ಸಾಕು ಧಾರಾಕಾರವಾಗಿ ಅನುದಾನ ಮಂಜೂರು ಮಾಡ್ತದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಒಂದೇ ಸಮುದಾಯದ ಸಂತೃಪ್ತಿ ಖಂಡನೀಯ:
ರಾಜ್ಯದಲ್ಲಿ ಶಾಲಾ ಮಕ್ಕಳ ಬಿಸಿಯೂಟಕ್ಕೂ ಹಣವಿಲ್ಲ ಎಂಬ ನೆಪ ಹೇಳುವ ಕಾಂಗ್ರೆಸ್ ಸರ್ಕಾರ ಕೇವಲ ಮತಬ್ಯಾಂಕ್ ಅನ್ನೇ ಗುರಿಯಾಗಿಸಿಕೊಂಡು ಒಂದು ಸಮುದಾಯಕ್ಕೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಿದೆ. ಇದು ಸಂವಿಧಾನದ ಸಮಾನತೆಯ ತತ್ತ್ವಗಳಿಗೆ ಸ್ಪಷ್ಟ ವಿರೋಧವಾಗಿದೆ.ರಾಜ್ಯದ ಒಟ್ಟಾರೆ ಹಿತಾಸಕ್ತಿ ಗಮನದಲ್ಲಿ ಇರಿಸಿಕೊಂಡು ಅನುದಾನ ಒದಗಿಸಬೇಕಾದ ಈ ಸರ್ಕಾರ, ಸಾರ್ವಜನಿಕ ಹಣವನ್ನು ಒಂದು ಸಮುದಾಯದ ಸಂತೃಪ್ತಿಗೆ ಬಳಸುತ್ತಿರುವುದು ಅತ್ಯಂತ ಖಂಡನೀಯ ಎಂದಿದ್ದಾರೆ
ಜನರೇ ಬುದ್ಧಿ ಕಲಿಸುತ್ತಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಕ್ರಮ ಸಂವಿಧಾನ ಮತ್ತು ಆಡಳಿತದ ಮೂಲ ಸಿದ್ಧಾಂತಕ್ಕೆ ಧಕ್ಕೆಯಾಗಿದೆ. ಸರ್ವರಿಗೂ ಸಮಾನ ಅವಕಾಶ ಒದಗಿಸುವುದು ಸಂವಿಧಾನಬದ್ಧ ಹೊಣೆಗಾರಿಕೆ ಆಗಿದೆ. ಅದು ಬಿಟ್ಟು ಮತಬ್ಯಾಂಕ್ ಗಾಗಿ ಹೀಗೆ ಓಲೈಕೆ ರಾಜಕಾರಣ ಮತ್ತು ತೀರಾ ತೀರಾ ತುಷ್ಟೀಕರಣಕ್ಕೆ ಇಳಿದರೆ ಮುಂದಿನ ದಿನಗಳಲ್ಲಿ ಜನರೇ ಬುದ್ಧಿ ಕಳಿಸುತ್ತಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.
Advertisement