
ಕಾಂಗ್ರೆಸ್ ನೇತೃತ್ವದ ಸರ್ಕಾರದ ನಾಯಕತ್ವ ಬದಲಾವಣೆ ವಿಷಯ ಕಾಂಗ್ರೆಸ್ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ. ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗ ಶಾಸಕರು ಸಚಿವರು ದೆಹಲಿಗೆ ತೆರಳಿದ ಬೆನ್ನಲ್ಲೇ ಅಧಿಕಾರ ಹಂಚಿಕೆಗೆ ಸಂಬಂಧಿಸಿದ ಚಟುವಟಿಕೆಗಳು ತೀವ್ರಗೊಂಡಿದೆ. ಈ ಬೆನ್ನಲ್ಲೇ ಹೈಕಮಾಂಡ್ ನ್ನು ಸಂಪರ್ಕಿಸಿರುವ ಸಿದ್ದರಾಮಯ್ಯ ಎಲ್ಲಾ ಗೊಂದಲಗಳಿಗೂ ತೆರೆ ಎಳೆಯುವಂತೆ ಮನವಿ ಮಾಡಿದ್ದಾರೆ. ದೂರವಾಣಿ ಮೂಲಕ ಪಕ್ಷದ ವರಿಷ್ಠರನ್ನು ಸಂಪರ್ಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಗೊಂದಲ ನಿವಾರಿಸುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ ಜೈಲಿನಲ್ಲಿರುವ ಶಾಸಕರಾದ ವಿನಯ್ ಕುಲಕರ್ಣಿ ಹಾಗೂ ವೀರೇಂದ್ರ ಪಪ್ಪಿ ಅವರೊಂದಿಗೆ ಚರ್ಚೆ ನಡೆಸಲು ಡಿಸಿಎಂ ಡಿಕೆ ಶಿವಕುಮಾರ್ ದಿಢೀರ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ. ಇನ್ನು ಸಿಎಂ-ಡಿಸಿಎಂ ಬೆಂಬಲಿಗರ ಹೇಳಿಕೆಗಳನ್ನು ಹೈಕಮಾಂಡ್ ಗಮನಿಸಿದ್ದು, ಪಕ್ಷದ ಶಾಸಕರು ಮತ್ತು ನಾಯಕರಿಗೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಎಚ್ಚರಿಕೆ ನೀಡಿದ್ದಾರೆ.
ಹಡಗು ನಿರ್ಮಾಣ ಮತ್ತು ಹಡಗಿನ ವಿವರಗಳ ಬಗ್ಗೆ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನದಲ್ಲಿರುವ ವ್ಯಕ್ತಿಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದ ಆರೋಪದ ಮೇಲೆ ಉತ್ತರ ಪ್ರದೇಶ ಮೂಲದ ಇಬ್ಬರು ವ್ಯಕ್ತಿಗಳನ್ನು ಉಡುಪಿಯಲ್ಲಿ ಬಂಧಿಸಲಾಗಿದೆ. ರೋಹಿತ್ ಸ್ಯಾಂಟ್ರಿ ಬಂಧಿತ ವ್ಯಕ್ತಿಗಳಾಗಿದ್ದು, ಉತ್ತರ ಪ್ರದೇಶದ ಸುಲ್ತಾನಪುರ ನಿವಾಸಿಗಳನ್ನು ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ರೋಹಿತ್ ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಇನ್ಸುಲೇಟರ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಸ್ಯಾಂಟ್ರಿ ಕೇರಳದ ಕೊಚ್ಚಿಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ 'ಈ ಇಬ್ಬರು ಹಡಗು ನಿರ್ಮಾಣದ ವಿವರಗಳು, ಹಡಗುಗಳ ಸಂಖ್ಯೆಗಳು ಮತ್ತು ಇತರ ವರ್ಗೀಕೃತ ಪಟ್ಟಿಗಳು ಸೇರಿದಂತೆ ಸೂಕ್ಷ್ಮ ಡೇಟಾವನ್ನು ಪಾಕಿಸ್ತಾನಿ ಸಂಖ್ಯೆಗಳಿಗೆ ನೇರವಾಗಿ ವಾಟ್ಸಾಪ್ ಸಂದೇಶಗಳ ಮೂಲಕ ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ'
ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಹಾಡುಹಗಲೇ ನಡೆದ 7 ಕೋಟಿ ರೂಪಾಯಿ ದರೋಡೆ ಪ್ರಕರಣದ ಸಂಬಂಧ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ನ್ನು ಬಂಧಿಸಲಾಗಿದೆ. ಅಣ್ಣಪ್ಪ ನಾಯ್ಕ್ ಇಡೀ ದರೋಡೆಯ ಮಾಸ್ಟರ್‌ಮೈಂಡ್ ಎನ್ನಲಾಗುತ್ತಿದೆ. ಇವರೇ ಆರೋಪಿ ಗ್ಯಾಂಗ್ ನ್ನು ದರೋಡೆ ಹೇಗೆ ಮಾಡಬೇಕೆಂದು ಸಂಚು ರೂಪಿಸಿದ್ದರು ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ಗ್ಯಾಂಗ್ ರೆಡಿ ಮಾಡಿದ್ದ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್, ದರೋಡೆ ಹೇಗೆ ಮಾಡಬೇಕೆಂದು ಹೇಳಿಕೊಟ್ಟಿದ್ದರು. ದರೋಡೆ ನಂತರ ಹೇಗೆ ತಪ್ಪಿಸಿಕೊಳ್ಳಬೇಕೆಂದು ಕೂಡ ತರಬೇತಿ ಕೊಟ್ಟಿದ್ದರು. ಪೊಲೀಸರು ಹೇಗೆ ಕೆಲಸ ಮಾಡುತ್ತಾರೆಂದು ಸಹ ತಿಳಿಸಿದ್ದರು ಎನ್ನಲಾಗಿದೆ. ಜೊತೆಗೆ, ತನಿಖೆಯಲ್ಲಿ ಸಿಎಂಎಸ್ ಕಂಪನಿಯ ಮಾಜಿ ಉದ್ಯೋಗಿ ಝೇವಿಯರ್ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಎಂಬುದು ಬಯಲಾಗಿದೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಪೊಲೀಸರು ₹5 ಕೋಟಿ 30 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಶೇ.50ರಷ್ಟು ಟ್ರಾಫಿಕ್ ದಂಡ ರಿಯಾಯಿತಿ ಇದೀಗ ಮತ್ತೆ ಜಾರಿಗೆ ಬಂದಿದೆ. ಈ ಮಾಹಿತಿಯನ್ನು ಸರ್ಕಾರ ಅಧಿಕೃತವಾಗಿ ಘೋಷಿಸಿದ್ದು, ಸಂಚಾರ ದಂಡ ರಿಯಾಯಿತಿ ಕುರಿತಂತೆ ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ, ಸರ್ಕಾರವು ಅದನ್ನು ಅಂಗೀಕರಿಸಿ ತಕ್ಷಣ ಜಾರಿಗೆ ತರಲು ಆದೇಶ ಹೊರಡಿಸಿದೆ. ಕಳೆದ ಬಾರಿ ದಂಡ ರಿಯಾಯಿತಿ ನೀಡಿದಾಗ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಹರಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಈ ಅವಕಾಶ ನೀಡಲಾಗಿದ್ದು, ನವೆಂಬರ್ 21ರಿಂದ ರಾಜ್ಯದಾದ್ಯಂತ 50% ದಂಡ ರಿಯಾಯಿತಿ ಯೋಜನೆ ಜಾರಿಗೆ ಬರಲಿದ್ದು, ಡಿಸೆಂಬರ್ 12 ರವರೆಗೆ ಚಾಲ್ತಿಯಲ್ಲಿರಲಿದೆ. ಬೆಂಗಳೂರಿನಲ್ಲಿ ಸಂಚಾರ ಪೊಲೀಸ್ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ವೆಬ್‌ಸೈಟ್‌ಗಳಲ್ಲಿ ವಿವರ ಪಡೆದು ಪಾವತಿಸಬಹುದು. ಜಿಲ್ಲೆಗಳಲ್ಲಿ ಸಮೀಪದ ಪೊಲೀಸ್ ಠಾಣೆಗಳಿಗೆ ಖುದ್ದು ಭೇಟಿ ನೀಡಿ ದಂಡ ಪಾವತಿಸಬಹುದಾಗಿದೆ.
Advertisement