

ಬೆಂಗಳೂರು: ಲೇಖಕ ಡಾ. ನಟರಾಜ್ ತಲಘಟ್ಟಪುರ ಅವರ 'ಬಣ್ಣ ಮೆಚ್ಚಿದವರು' ಕನ್ನಡ ನಾಟಕದ ಇಂಗ್ಲಿಷ್ ಅನುವಾದ 'ಅಡ್ಮೈರರ್ಸ್ ಆಫ್ ಕಲರ್' ಮತ್ತು ಹಿಂದಿ ಅನುವಾದ 'ರಂಗೋನ್ ಕೆ ಉಪಾಸಕ್'' ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.
ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಬಿ.ಎಲ್. ಶಂಕರ್ ಇದೇ ಶನಿವಾರ (ನವೆಂಬರ್ 22) ಸಂಜೆ 5 ಗಂಟೆಗೆ ಜಯನಗರ 4ನೇ ಬ್ಲಾಕಿನ ಭಾರತ್ ಎಜುಕೇಷನ್ ಸೊಸೈಟಿ ಸಭಾಂಗಣದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಈ ನಾಟಕವು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಸ್ವೆತಾಸ್ಲೋವ್ ರೋರಿಕ್ ಮತ್ತು ಪತ್ನಿ ದೇವಿಕಾ ರಾಣಿ ಅವರ ಜೀವನ ಮತ್ತು ಬದುಕಿನ ಕೊನೆಯ ದಿನಗಳ ಅವಸ್ಥೆಯನ್ನು ಆಧರಿಸಿದೆ. ಇದೇ ಸಂದರ್ಭದಲ್ಲಿ ಡಾ. ನಟರಾಜ್ ಅವರು ರಚಿಸಿರುವ ಐತಿಹಾಸಿಕ ನಾಟಕ 'ಬಯಲ ರೂಪ', ನಾಟಕ 'ಬೊಗಸೆ ತುಂಬ ಮಣ್ಣು' ಹಾಗೂ ಕಥಾ ಸಂಕಲನ 'ಮಿಡಿನಾಗರಗಳ ನಡುವೆ' ಸಹ ಬಿಡುಗಡೆ ಆಗಲಿವೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ಹಾಗೂ ಪತ್ರಕರ್ತರಾದ ರಘುನಾಥ ಚ.ಹ. ಕೃತಿಗಳ ಕುರಿತು ಮಾತನಾಡಲಿದ್ದಾರೆ. 'ಬಣ್ಣ ಮೆಚ್ಚಿದವರು' ನಾಟಕವನ್ನು ಇಂಗ್ಲಿಷ್ ಗೆ ಅನುವಾದಿಸಿರುವ ಡಾ. ರೇಖಾ ಕೌಶಿಕ್ ಪಿ. ಆರ್. ಹಾಗೂ ಹಿಂದಿಗೆ ಅನುವಾದಿಸಿರುವ ಪ್ರೊ. ಷಾಕಿರಾ ಖಾನಂ ಹಾಗೂ ಲೇಖಕ ಡಾ. ನಟರಾಜ್ ತಲಘಟ್ಟಪುರ ಅವರು ಉಪಸ್ಥಿತರಿರಲಿದ್ದಾರೆ.
Advertisement