

ಬೆಂಗಳೂರು: ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಐಟಿ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರು ನಗರ ಮತ್ತು ರಾಜಧಾನಿಗೆ ಹತ್ತಿರದಲ್ಲಿಯೇ ಇರುವ ಬೆಂಗಳೂರು ಗ್ರಾಮೀಣ ಭಾಗದ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯವು ಅತ್ಯಂತ ಕಡಿಮೆಯಾಗಿದ್ದು, ರಾಜ್ಯದ ಸರಾಸರಿಗಿಂತ ಕಡಿಮೆಯಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬಿಡುಗಡೆ ಮಾಡಿದ ಮಕ್ಕಳ ಹಕ್ಕುಗಳ ಸೂಚ್ಯಂಕ (CRI) ವರದಿ ತಿಳಿಸಿದೆ.
ಬೆಂಗಳೂರು ನಗರದಲ್ಲಿ 3 ರಿಂದ 5 ನೇ ತರಗತಿಯವರೆಗಿನ ಮಕ್ಕಳಲ್ಲಿ ಕೇವಲ ಶೇಕಡಾ 17.6 ರಷ್ಚು ಮಕ್ಕಳು ಮಾತ್ರ 2 ನೇ ತರಗತಿಯ ಪಠ್ಯಪುಸ್ತಕವನ್ನು ನಿರರ್ಗಳವಾಗಿ ಓದಬಲ್ಲರು ಎಂಬ ಆತಂಕಕಾರಿ ವಿಷಯ ವರದಿಯಿಂದ ಬಹಿರಂಗವಾಗಿದೆ. ಬೆಂಗಳೂರು ಗ್ರಾಮೀಣ ಮಕ್ಕಳಿಗೆ ಇದು ಶೇಕಡಾ 17.3 ರಷ್ಟಾಗಿದೆ. ಬೆಂಗಳೂರು ಗ್ರಾಮೀಣ ಭಾಗದ ಮಕ್ಕಳಲ್ಲಿ ಕೇವಲ 44.7% ಮತ್ತು ಬೆಂಗಳೂರು ನಗರದಲ್ಲಿ 49.7% ಮಕ್ಕಳು ಸರಳ ವ್ಯವಕಲನ ಸಮಸ್ಯೆಗಳನ್ನು ಪರಿಹರಿಸಬಲ್ಲರು. ಇದು ರಾಜ್ಯದ ಸರಾಸರಿ 34% ಕ್ಕಿಂತ ಕಡಿಮೆಯಾಗಿದೆ.
ಮಕ್ಕಳಲ್ಲಿ ಶಿಕ್ಷಣದ ಗುಣಮಟ್ಟ ತೀರಾ ಇಳಿಮುಖವಾಗಿರುವ ಜಿಲ್ಲೆಗಳಲ್ಲಿ ಶಿಕ್ಷಣ, ಮೂಲಸೌಕರ್ಯ ಮತ್ತು ಕಲಿಕಾ ವಿಧಾನಗಳ ಗುಣಮಟ್ಟವನ್ನು ಬಲಪಡಿಸುವಂತೆ ವರದಿ ಸೂಚಿಸಿದೆ. ಕೋವಿಡ್ -19 ಸಮಯದಲ್ಲಿ ಲಾಕ್‌ಡೌನ್ ಇದ್ದ ಕಾರಣ ಮಕ್ಕಳ ಓದುವ ಸಾಮರ್ಥ್ಯ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ. ನಾಲ್ಕು ವರ್ಷಗಳ ನಂತರ, ಮಕ್ಕಳು ತಮ್ಮ ಕಲಿಕೆಯಲ್ಲಿ ಸಾಂಕ್ರಾಮಿಕ ಪೂರ್ವದ ಮಟ್ಟವನ್ನು ತಲುಪಿಯೇ ಇಲ್ಲ ಎಂದು ವರದಿ ತಿಳಿಸಿದೆ.
Institute for Social and Economic Change ನ ಎಸ್ ಮಾದೇಶ್ವರನ್ ಮತ್ತು ಬಿ ಪಿ ವಾಣಿ ಅವರ ಅಧ್ಯಯನದಿಂದ ಈ ವರದಿ ಸಿದ್ಧಪಡಿಸಲಾಗಿದೆ. ಅವರು ವಾರ್ಷಿಕ ಶಿಕ್ಷಣ ಸ್ಥಿತಿ ವರದಿ 2024 ರ ಸಂಶೋಧನೆಗಳನ್ನು ಸಹ ಬಳಸಿಕೊಂಡಿದ್ದಾರೆ. ಗ್ರಾಮೀಣ ಕರ್ನಾಟಕದಲ್ಲಿ, 3 ನೇ ತರಗತಿಯ ಮಕ್ಕಳು 2 ನೇ ತರಗತಿಯ ಪಠ್ಯವನ್ನು ಓದಬಲ್ಲರು, ಅವರ ಶೇಕಡಾವಾರು ಪ್ರಮಾಣ ಗಂಡುಮಕ್ಕಳಲ್ಲಿ 32.4% ಮತ್ತು ಹೆಣ್ಣು ಮಕ್ಕಳಲ್ಲಿ 35.6% ಆಗಿದೆ. ಅದೇ ರೀತಿ, ವಿವಿಧ ವರ್ಗಗಳಲ್ಲಿ ಮಕ್ಕಳ ಗಣಿತದ ಸಾಮರ್ಥ್ಯವು ವರ್ಷಗಳಲ್ಲಿ ತುಂಬಾ ಕಳಪೆಯಾಗಿದೆ ಎಂದು ವರದಿ ಹೇಳಿದೆ.
ಗ್ರಾಮೀಣ ಕರ್ನಾಟಕದಲ್ಲಿ, 5 ನೇ ತರಗತಿಯ ಕೇವಲ 35.3% ವಿದ್ಯಾರ್ಥಿಗಳು ಮತ್ತು 39.9% ವಿದ್ಯಾರ್ಥಿನಿಯರು ಸರಳ ಭಾಗಾಕಾರ ಸಮಸ್ಯೆಯನ್ನು ಪರಿಹರಿಸಬಲ್ಲರು ಎಂಬುದು ಗೊತ್ತಾದರೆ ಕಲಿಕೆ ಗುಣಮಟ್ಟ ನಿರಾಶದಾಯಕವಾಗಿದೆ ಎಂದು ವರದಿ ತಿಳಿಸಿದೆ.
ಮಾನ್ಯತೆ ಪಡೆದ ಮತ್ತು ಅನುದಾನರಹಿತ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಶಿಕ್ಷಕ ಲೋಕೇಶ್ ತಾಳಿಕೋಟೆ, ಇದು ಸರ್ಕಾರಿ ಶಾಲೆಗಳಿಗೆ ಮಾತ್ರ ಸೀಮಿತವಾಗಿಲ್ಲ, ಖಾಸಗಿ ಶಾಲೆಗಳಲ್ಲಿಯೂ ಇದೇ ರೀತಿ ಇದೆ. B.Ed ಪೂರ್ಣಗೊಳಿಸಿದ ಹೆಚ್ಚಿನ ಶಿಕ್ಷಕರಿಗೆ ಬೋಧನಾ ಕೌಶಲ್ಯದ ಕೊರತೆಯಿದೆ ಎಂದು ಹೇಳಿದರು.
ಶಿಕ್ಷಕರು, ರಾಜ್ಯ ಪಠ್ಯ ಕ್ರಮದ ಸಮಸ್ಯೆಗಳೇನು?
ಖಾಸಗಿ ಶಾಲೆಯಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳಲು ನಾವು ಸಂದರ್ಶನ ನಡೆಸಿದಾಗ, ಚೆನ್ನಾಗಿ ಕಲಿಸಬಲ್ಲ ನುರಿತ ಅಭ್ಯರ್ಥಿಯನ್ನು ನಾವು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಸರ್ಕಾರಿ ಶಾಲಾ ಶಿಕ್ಷಕರಿಗೆ ಕೆಲವೇ ಕೆಲವು ಶಿಕ್ಷಕರ ತರಬೇತಿ ಕಾರ್ಯಕ್ರಮಗಳನ್ನು ಮಾತ್ರ ಆಯೋಜಿಸಲಾಗುತ್ತದೆ. ಮಕ್ಕಳು ಓದಲು, ಬರೆಯಲು ಮತ್ತು ಸಮಸ್ಯೆ ಪರಿಹರಿಸಲು ಸಮರ್ಥರಾಗುವಂತೆ ಮಾಡಲು ಮಕ್ಕಳು ಕಲಿಯುವುದನ್ನು ಬಿಟ್ಟು ಶಿಕ್ಷಕರು ತಾವೂ ಕಲಿಯಬೇಕು ಎಂದರು.
ರಾಜ್ಯ ಮಂಡಳಿಯ ಪಠ್ಯಪುಸ್ತಕಗಳು 20 ವರ್ಷಗಳಿಂದ ಒಂದೇ ರೀತಿ ಉಳಿದಿವೆ ಎಂದು ಹೇಳಿದರು. ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ರಚಿಸಲಾದ ಕೊನೆಯ ಸಮಿತಿ ಬರಗೂರು ರಾಮಚಂದ್ರಪ್ಪ ಸಮಿತಿ. ಹೆಚ್ಚಿನ ವಿದ್ಯಾರ್ಥಿಗಳು ರಾಜ್ಯ ಮಂಡಳಿಯ ಪಠ್ಯಪುಸ್ತಕಗಳಲ್ಲಿ ಒಂದೇ ಪಠ್ಯಕ್ರಮವನ್ನು ಓದುವ ಬದಲು ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಮತ್ತು AI ಪ್ರಪಂಚಕ್ಕೆ ಸಂಬಂಧಿಸಿದ ಪಾಠಗಳನ್ನು ಕಲಿಯಲು CBSE ಮತ್ತು ICSE ನ್ನು ಸಿಲೆಬಸ್ ಗೆ ಹೋಗುತ್ತಿದ್ದಾರೆ ಎಂದರು.
ಹೆಡ್ ಹೆಲ್ಡ್ ಹೈ ಫೌಂಡೇಶನ್‌ನ ಸಹ-ಸಂಸ್ಥಾಪಕ ಮದನ್ ಪದಕಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ನೀತಿಗಳಲ್ಲಿ ಸೇರಿಸಲಾದ ಶಾಲೆಗಳಲ್ಲಿ ಹೊಸ ವಿಧಾನಗಳನ್ನು ಕಲಿಸಲು ಶಿಕ್ಷಕರು ತರಗತಿ ಕೊಠಡಿಗಳಲ್ಲಿ ಸಮಯ ಕಳೆಯುವಾಗ ಅವರಿಗೆ ಪ್ರೋತ್ಸಾಹ ಧನ ನೀಡುವುದು ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಏಕೆಂದರೆ ಅವರ ಕೆಲಸದ ಸಮಯ ಹೆಚ್ಚಾಗುತ್ತದೆ. ನೀವು ಅವರನ್ನು ಪ್ರೇರೇಪಿಸುವಂತೆ ಮಾಡಬೇಕು. ಇದಲ್ಲದೆ, ಪೋಷಕರು ಮಗುವಿನ ಕಲಿಕೆಯ ಫಲಿತಾಂಶಗಳತ್ತ ಗಮನ ಹರಿಸಬೇಕು, ಮಕ್ಕಳು ಶಾಲೆಗಿಂತ ಕುಟುಂಬದವರ ಜೊತೆ ಸಮಯವನ್ನು ಕಳೆಯುವುದು ಹೆಚ್ಚು. ಶಿಕ್ಷಣದ ಪರಿಸರ ವ್ಯವಸ್ಥೆಯಲ್ಲಿ ಅವರನ್ನು ಸಮಾನ ಪಾತ್ರಧಾರಿಗಳಾಗಿ ನೋಡಬೇಕು. ಪ್ರತಿಯೊಂದಕ್ಕೂ ಶಿಕ್ಷಕರು ಮತ್ತು ಶಾಲೆಗಳ ಮೇಲೆ ಜವಾಬ್ದಾರಿಯನ್ನು ಹೊರಿಸಲು ಸಾಧ್ಯವಿಲ್ಲ ಎಂದರು.
Advertisement