

ಮೈಸೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ಕದನ ಮುಂದವರಿಯುತ್ತಿರುವುದರ ಮಧ್ಯೆ ನಾಡಿನ ಹಲವು ಮಠಾಧೀಶರು, ಧಾರ್ಮಿಕ ಮುಖಂಡರು ಕೂಡ ಹೇಳಿಕೆ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ.
ಮೈಸೂರಿನಲ್ಲಿ ಲಲಿತಾ ಭಾರತಿ ವಿಜಯೇಂದ್ರ ತೀರ್ಥ ಗುರುಗಳು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗ್ರಹಗತಿಗಳ ಪ್ರಕಾರ, ಇನ್ನೆರಡು ದಿನಗಳಲ್ಲಿ ಡಿಕೆಶಿ ಸಿಎಂ ಆಗಬೇಕು, ಇಲ್ಲದಿದ್ದರೆ ಈ ಜನ್ಮದಲ್ಲಿ ಆ ಯೋಗವಿಲ್ಲ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಡಿಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಮೈಸೂರಿನಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ರಾಜ್ಯಲಕ್ಷ್ಮಿ ಪೀಠ ಪ್ರಾಪ್ತ್ಯರ್ಥ ಸಂಕಲ್ಪ ಪೂಜೆ ನೆರನೇರಿಕೆ ಮಾಡಲಾಗಿದೆ.
ಹುಡ್ಕೋ ಬಡಾವಣೆಯ ನವಗ್ರಹ ಸಹಿತ ಬಲಮುರಿ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಗಿದೆ. ಗಣಪತಿ ಹಾಗೂ ಲಲಿತಾ ತ್ರಿಪುರಸುಂದರಿ ದೇವಿಗೆ ಪೂಜೆ ಮಾಡಲಾಗಿದೆ. ಪೂಜೆ ಮೂಲಕ ಮುಖ್ಯಮಂತ್ರಿ ಪದವಿ ಪ್ರಾಪ್ತಿಗೆ ಸಂಕಲ್ಪ ಮಾಡಿಕೊಳ್ಳಲಾಗಿದೆ.
ಇನ್ನು ಎರಡು ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು. ಅದಕ್ಕಾಗಿ ಸಂಕಲ್ಪ ಪೂಜೆ ಮಾಡಿದ್ದೇವೆ. ದೇವಿ ಕೂಡ ಬಲಗಡೆಯಿಂದ ಹೂ ವರ ಕೊಟ್ಟು ಆಶಿರ್ವಾದ ಮಾಡಿದ್ದಾಳೆ. ಡಿ.ಕೆ.ಶಿವಕುಮಾರ್ ಖಂಡಿತ ಮುಖ್ಯಮಂತ್ರಿ ಆಗುತ್ತಾರೆ. ಇದು ನೂರಕ್ಕೆ ಸಾವಿರ ಪಟ್ಟು ಆಗುತ್ತೆ. ಯಾರು ಏನೇ ಮಾಡಿದರೂ ದೈವ ಸಂಕಲ್ಪದ ಮುಂದೆ ಯಾವುದೂ ನಡೆಯೋದಿಲ್ಲ ಎಂದು ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
Advertisement