ಜನಸ್ನೇಹಿ ಅಧಿಕಾರಿ ಪ್ರಾಣ ಕಸಿದ ಶ್ವಾನ: ಮುಗಿಲು ಮುಟ್ಟಿದ ಬೀಳಗಿ ಕುಟುಂಬಸ್ಥರ ಆಕ್ರಂದನ; ಬಡತನದಲ್ಲಿ ಅರಳಿದ್ದ ಧೀಮಂತ ಪ್ರತಿಭೆ

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ ಕಾರಿನಲ್ಲಿದ್ದವರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಐದು ಜನ ಪ್ರಯಾಣಿಸುತ್ತಿದ್ದು, ಐವರಲ್ಲಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.
 Mahantesh Bilagi
ಮಹಾಂತೇಶ್ ಬೀಳಗಿ
Updated on

ಬೆಳಗಾವಿ: ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿನ್ನೆ ಕುಟುಂಬಸ್ಥರ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಕಲಬುರಗಿಯ ಜೇವರ್ಗಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಇದೀಗ ಅವರ ಮೃತದೇಹವನ್ನು ಕಲಬುರಗಿಯಿಂದ ಬೆಳಗಾವಿಯ ರಾಮದುರ್ಗಕ್ಕೆ ತಲುಪಿಸಲಾಗಿದ್ದು, ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.

ರಾಜ್ಯ ಕಂಡ ಜನಸ್ನೇಹಿ ಹಾಗೂ ದಕ್ಷ ಅಧಿಕಾರಿ ಐಎಎಸ್ ಮಹಾಂತೇಶ್ ಬೀಳಗಿ ವಿಜಯಪುರ ಮಾರ್ಗವಾಗಿ ಬರುತ್ತಿದ್ದ ಅವರ ಇನ್ನೋವಾ ಕಾರು, ರಸ್ತೆಯಲ್ಲಿ ಅಡ್ಡ ಬಂದ ಬೀದಿ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡಿದೆ. ನಂತರ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಸುಮಾರು ನೂರು ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ ಕಾರಿನಲ್ಲಿದ್ದವರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಐದು ಜನ ಪ್ರಯಾಣಿಸುತ್ತಿದ್ದು, ಐವರಲ್ಲಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಮಹಾಂತೇಶ್ ಬೀಳಗಿ ಅವರ ಸ್ನೇಹಿತ ಇರಣ್ಣ ಸಿರಸಂಗಿ ಅವರೂ ಸಹ ಸಾವನ್ನಪ್ಪಿರುವುದು ದೃಢಪಟ್ಟಿದೆ. ಅಪಘಾತದ ಸ್ಥಳದಲ್ಲಿ ಮರ ಕಿತ್ತು ಬಂದಿರುವುದು ಕಾರಿನ ವೇಗ ಮತ್ತು ಡಿಕ್ಕಿಯ ಭೀಕರತೆಗೆ ಸಾಕ್ಷಿಯಾಗಿದೆ.

 Mahantesh Bilagi
ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

1974 ರಲ್ಲಿ ರಾಮದುರ್ಗದಲ್ಲಿ ಜನಿಸಿದ ಮಹಾಂತೇಶ್, ಎರಡು ಹೊತ್ತು ಊಟ ಮಾಡದಷ್ಟು ಕಡು ಬಡತನದಲ್ಲಿ ಬೆಳದಿದ್ದರು. ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದರು. ಕೆಎಎಸ್​ ಪಾಸ್​ ಮಾಡಿ ನೇರವಾಗಿ ಎಸಿಯಾಗಿ ಆಯ್ಕೆ ಆಗಿದ್ದರು. ಆನಂತರ ಐಎಎಸ್​​ ಹುದ್ದೆಗೆ ಬಡ್ತಿ ಪಡೆದು ಉನ್ನತಸ್ಥಾನಕ್ಕೇರಿದ್ದರು. ಸರ್ಕಾರಿ ಸೇವೆ ನಿರ್ವಹಿಸುತ್ತಿದ್ದರು, ಸ್ಪರ್ಧಾ ವಿದ್ಯಾರ್ಥಿಗಳಿಗೆ ಕೋಚಿಂಗ್​ ನೀಡಿತ್ತಿದ್ದರು. ಅವರ ಈ ಸಾಧನೆ ಯುವಕರಿಗೆ ಪ್ರೇರಣೆಯಾಗಿತ್ತು.

ಧಾರವಾಡದಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡಿದರು. ಅವರು ದಾವಣಗೆರೆ ಜಿಲ್ಲೆಯ ಉಪ ಆಯುಕ್ತರಾಗಿಯೂ ಸೇರಿದಂತೆ ಹಲವಾರು ಪ್ರಮುಖ ಆಡಳಿತಾತ್ಮಕ ಹುದ್ದೆಗಳಲ್ಲಿ ಕೆಲಸ ಮಾಡಿದರು.

ನಂತರ ಅವರು ಈ ವರ್ಷದ ಜನವರಿಯಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಮ್) ನೇತೃತ್ವ ವಹಿಸಿದ್ದರು.

ಬಾಲ್ಯದಿಂದಲೂ ಕಷ್ಟಕರ ಜೀವನ ನಡೆಸಿದ ಅವರು ಬೆಳೆದು ಬಂದ ರೀತಿಯೇ ವಿಶೇಷವಾಗಿತ್ತು. ಅವರ ತಾಯಿ ಮನೆಗೆಲಸ ಮಾಡಿ ಮಹಾಂತೇಶ್ ಶಿಕ್ಷಣವನ್ನು ಮುಂದುವರಿಸಿದರು. ಕೆಎಎಸ್ ಪರೀಕ್ಷೆ ಮತ್ತು ನಂತರ ಐಎಎಸ್ ಪರೀಕ್ಷೆ ಪಾಸ್ ಮಾಡಿ ಉತ್ತಮ ಜೀವನ ಕಟ್ಟುಕೊಂಡಿದ್ದರು. ತಮ್ಮ ಬಾಲ್ಯದಲ್ಲಿ ತಾನು ಮತ್ತು ತಮ್ಮ ಸಹೋದರರು 5 ನೇ ವಯಸ್ಸಿನಿಂದ ಹೇಗೆ ಕಷ್ಟಪಟ್ಟರು ಎಂಬುದನ್ನು ಬೀಳಗಿ ಅವರು ಹಲವಯ ಸಂದರ್ಶನಗಳಲ್ಲಿ ನೆನಪಿಕೊಂಡಿದ್ದರು. ಮೃತರಿಗೆ ಪತ್ನಿ ಮತ್ತು ಮಕ್ಕಳಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com