

ಮೈಸೂರು: ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿರುವ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಕೊಲೆಯಾದ ಯುವಕನನ್ನು ಸಯ್ಯದ್ ಸುಫಿಯಾನ್ (19) ಎಂದು ಗುರುತಿಸಲಾಗಿದೆ. ಬುಧವಾರ ಬೆಳಿಗ್ಗೆ 5.40 ಗಂಟೆ ಸಮಯದಲ್ಲಿ ಸ್ನೇಹಿತನ ಜೊತೆ ಟೀ ಕುಡಿಯಲು ಹೋಗಿದ್ದ ವೇಳೆ ಅಲ್ಲೇ ಇದ್ದ ಇತರ ಸ್ನೇಹಿತರೊಂದಿಗೆ ಜಗಳವಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮದ್ಯವಸನಿಗಳಾದ ಇಬ್ಬರು ಯುವಕರು ಚಾಕುವಿನಿಂದ ಇರಿದಿದ್ದಾರೆ.
ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದರೂ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಕೊಲೆ ಮಾಡಿದ್ದಾರೆ. ಯುವಕನ ಎದೆ ಮತ್ತು ಬೆನ್ನಿನ ಭಾಗಕ್ಕೆ ಇರಿದು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕೊಲೆ ನಡೆಯುವ ಸ್ಥಳದಲ್ಲಿ ಸಾರ್ವಜನಿಕರು ಓಡಾಡುತ್ತಿದ್ದರೂ ಯಾರೊಬ್ಬರೂ ಈತನ ಸಹಾಯಕ್ಕೆ ಬರಲಿಲ್ಲ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕ ಸಹಾಯಕ್ಕಾಗಿ ಅಂಗಲಾಚಿದರೂ ಯಾವೊಬ್ಬ ನಾಗರೀಕರೂ ಸಹಾಯ ಮಾಡಲಿಲ್ಲ. ರಸ್ತೆಯಲ್ಲೆ ನರಳಾಡಿ ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಈ ಎಲ್ಲಾ ಸನ್ನಿವೇಶಗಳ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಉದಯಗಿರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪತಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಘಟನೆ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ಪ್ರದೇಶದಲ್ಲಿ ಯುವಕರಿಗೆ ಗಾಂಜಾ, ದ್ರಾವಣ ಮತ್ತು ಇತರ ಮಾದಕ ವಸ್ತುಗಳು ಸುಲಭವಾಗಿ ಸಿಗುತ್ತಿದೆ, ಇದರಿಂದಾಗಿ ಯುವಕರು ಇಂತಹ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕೊಲೆಯ ಹಿಂದೆ ಅಂತಹ ಯುವಕರ ಕೈವಾಡವಿದೆ ಎಂದು ಸಂತ್ರಸ್ತನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
Advertisement