News headlines 02-10-2025 | ವಿಶ್ವವಿಖ್ಯಾತ ಜಂಬೂ ಸವಾರಿಯೊಂದಿಗೆ Mysuru Dasara ಸಂಪನ್ನ; ವಿಶ್ವದಾಖಲೆ ಪಟ್ಟಿಗೆ Shakti Scheme; FKCCI ಅಧ್ಯಕ್ಷರಾಗಿ ಉಮಾ ರೆಡ್ಡಿ ಅಧಿಕಾರ ಸ್ವೀಕಾರ

News headlines 02-10-2025 | ವಿಶ್ವವಿಖ್ಯಾತ ಜಂಬೂ ಸವಾರಿಯೊಂದಿಗೆ Mysuru Dasara ಸಂಪನ್ನ; ವಿಶ್ವದಾಖಲೆ ಪಟ್ಟಿಗೆ Shakti Scheme; FKCCI ಅಧ್ಯಕ್ಷರಾಗಿ ಉಮಾ ರೆಡ್ಡಿ ಅಧಿಕಾರ ಸ್ವೀಕಾರ

1. ವಿಶ್ವವಿಖ್ಯಾತ ಜಂಬೂ ಸವಾರಿಯೊಂದಿಗೆ Mysuru Dasara ಸಂಪನ್ನ

ಜಗತ್ ಪ್ರಸಿದ್ಧ ಆಕರ್ಷಣೆ ಜಂಬೂ ಸವಾರಿಯೊಂದಿಗೆ ಮೈಸೂರು ದಸರಾಗೆ ಇಂದು ತೆರೆ ಬಿದ್ದಿದ್ದು ನವರಾತ್ರಿ ಸಂಭ್ರಮ, ಸಡಗರಗಳೊಂದಿಗೆ ಸಂಪನ್ನವಾಗಿದೆ. ಸಂಜೆ 4.42ರಿಂದ 5.06 ವರೆಗಿನ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ, ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ತಾಯಿಗೆ ಸಿಎಂ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಆರಂಭಗೊಂಡಿತು. ಜಂಬೂ ಸವಾರಿಗೆ ಚಾಲನೆ ನೀಡಿದ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಂಸದ ಯದುವೀರ್ ಒಡೆಯರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. 6ನೇ ಬಾರಿಗೆ ಅಭಿಮನ್ಯು ಆನೆ ಚಿನ್ನದ ಅಂಬಾರಿಯನ್ನು ಹೊತ್ತಿದ್ದು ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕಿದ್ದು ಈ ಬಾರಿಯ ಮೈಸೂರು ದಸರಾ ಉತ್ಸವದ ವಿಶೇಷವಾಗಿತ್ತು. ಇದಕ್ಕೂ ಮೊದಲು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬನ್ನಿಮರಕ್ಕೆ ಪೂಜೆ ಸಲ್ಲಿಸಿದರು.

ಇನ್ನು ಜಂಬೂ ಸವಾರಿಯ ಜೊತೆಗೆ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು. 58 ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಸಾಗಿದ್ದು, 31 ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ವೈಶಿಷ್ಟ್ಯಗಳನ್ನು ಪ್ರದರ್ಶಿಸಿದ ಸ್ತಬ್ಧ ಚಿತ್ರಗಳು ಎಲ್ಲರ ಗಮನ ಸೆಳೆದವು.

2. ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಉತ್ಸವದಲ್ಲಿ ಪುಷ್ಪಾರ್ಚನೆ ಮಾಡುತ್ತೇನೆ- CM 

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಉತ್ಸವದಲ್ಲಿ ಪುಷ್ಪಾರ್ಚನೆ ಮಾಡುತ್ತೇನೆಂಬ ಭರವಸೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಾಡಹಬ್ಬ ದಸರಾ ವೇಳೆಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡುವುದಿಲ್ಲ ಎಂದು ಹೇಳಿದ್ದ ವಿಪಕ್ಷಗಳು ಭವಿಷ್ಯಕಾರರಲ್ಲ. ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಉತ್ಸವದಲ್ಲಿ ಪುಷ್ಪಾರ್ಚನೆ ಮಾಡುತ್ತೇನೆಂಬ ಭರವಸೆ ಇದೆ ಎಂದು ಹೇಳಿದ್ದಾರೆ. ಸಿಎಂ ಹೇಳಿಕೆಗೆ ಧ್ವನಿಗೂಡಿಸಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುತ್ತಾರೆ. ಸದ್ಯ ಸುದ್ದಿಯಾಗಿರುವಂತೆ ರಾಜ್ಯದಲ್ಲಿ ಯಾವುದೇ ರಾಜಕೀಯ ಕ್ರಾಂತಿಯಾಗುವುದಿಲ್ಲ ಎಂದು ಹೇಳಿದ್ದಾರೆ.

3. FKCCI ನ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಉಮಾ ರೆಡ್ಡಿ ಅಧಿಕಾರ ಸ್ವೀಕಾರ

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (FKCCI) ಅಧ್ಯಕ್ಷರಾಗಿ ಉಮಾ ರೆಡ್ಡಿ ಅಧಿಕಾರ ವಹಿಸಿಕೊಂಡಿದ್ದಾರೆ. ಸರ್ ಎಂ ವಿಶ್ವೇಶ್ವರಯ್ಯ ಅವರು 1916 ರಲ್ಲಿ ಸ್ಥಾಪಿಸಿದಾಗಿನಿಂದ, ಸಂಸ್ಥೆಯ 108 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಸಲ ಮಹಿಳೆಯೊಬ್ಬರು ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ. ಪವರ್ ಎಲೆಕ್ಟ್ರಾನಿಕ್ ಭಾಗಗಳ ಘಟಕಗಳಲ್ಲಿ ಪರಿಣತಿ ಹೊಂದಿರುವ ಮೆಸರ್ಸ್ ಹೈಟೆಕ್ ಮ್ಯಾಗ್ನೆಟಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿರುವ ಉಮಾ ರೆಡ್ಡಿ, ಈ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದ ಅನುಭವ ಹೊಂದಿದ್ದಾರೆ.

4. RSS ಗೂ ಸ್ವಾತಂತ್ರ್ಯ ಚಳುವಳಿಗೂ ಸಂಬಂಧವಿಲ್ಲ DK Shivakumar

ದೇಶಾದ್ಯಂತ ಆರ್ ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಈ ಮಧ್ಯೆ ಆರ್ ಎಸ್ಎಸ್ ಬಗ್ಗೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಆ ಸಂಘಟನೆಯು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್‌ನ ಶತಮಾನೋತ್ಸವ ಆಚರಣೆ ಬಗ್ಗೆ ಕೇಳಿದಾಗ, 'ಅವರು ಏನು ಬೇಕಾದರೂ ಮಾಡಲಿ. ಆದರೆ, ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ' ಎಂದು ಹೇಳಿದ್ದಾರೆ.

5. ವಿಶ್ವದಾಖಲೆ ಪಟ್ಟಿಗೆ Shakti Scheme

ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಪೈಕಿ ಒಂದಾಗಿರುವ ಶಕ್ತಿ ಯೋಜನೆ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ ಅವಾರ್ಡ್ ಗಿಟ್ಟಿಸಿಕೊಂಡಿದೆ. ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಬಿಎಂಟಿಸಿ ಬಸ್ ಗಳಲ್ಲಿ ಇಲ್ಲಿಯವರೆಗೂ 504 ಕೋಟಿ 90 ಲಕ್ಷ ಬಾರಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಬಸ್‌ನಲ್ಲಿ ಸಂಚಾರ ಮಾಡಿರುವ ಹಿನ್ನೆಲೆಯಲ್ಲಿ ಶಕ್ತಿ ಯೋಜನೆ ವಿಶ್ವ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದೆ ಶಕ್ತಿ ಯೋಜನೆಯನ್ನು ಕಂಡ ದೇಶದ ವಿವಿಧ ರಾಜ್ಯಗಳು ಈ ಯೋಜನೆ ಜಾರಿ ತರಲು ಚಿಂತಿಸಿವೆ. ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com