
ಬೆಂಗಳೂರು: ಮಲೆ ಮಹದೇಶ್ವರ(ಎಂಎಂ) ಬೆಟ್ಟದಲ್ಲಿ ಮತ್ತೊಂದು ಹುಲಿ ಮೃತಪಟ್ಟಿದ್ದು, ಆ ಹುಲಿಗೆ ವಿಷಪ್ರಾಶನ ಮಾಡಿ ಹತ್ಯೆ ಮಾಡಿದ ಆರೋಪದ ಮೇಲೆ ಶಂಕಿತರನ್ನು ಶನಿವಾರ ವಶಕ್ಕೆ ಪಡೆಯಲಾಗಿದೆ.
ಪಚ್ಚೆದೊಡ್ಡಿತಾಂಡಾ ನಿವಾಸಿಗಳಾದ ಪಚ್ಚೆಮಲ್ಲು ಮತ್ತು ಮಂಜುನಾಥ ಎಂಬುವವರನ್ನು ಜಿಲ್ಲೆಯ ಹನೂರು ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಹುಲಿಗೆ ವಿಷಪ್ರಾಶನ ಮಾಡಿ ಕೊಂದಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಈ ಪ್ರದೇಶವನ್ನು ಹುಲಿ ಮೀಸಲು ಪ್ರದೇಶವೆಂದು ಘೋಷಿಸುವ ಬಗ್ಗೆ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ.
ಅಕ್ಟೋಬರ್ 2 ರಂದು 12 ವರ್ಷದ ಹುಲಿಯ ಮೃತದೇಹ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ, ಆ ಪ್ರಾಣಿಗೆ ವಿಷಪ್ರಾಶನ ಮಾಡಿರುವುದು ಕಂಡುಬಂದಿದೆ.
ಈಗಾಗಲೇ ಹನೂರು ವಲಯ ಅರಣ್ಯಾಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತು ಪ್ರಾಥಮಿಕ ಮಾಹಿತಿ ಪ್ರಕಾರ ಹುಲಿಗೆ ವಿಷಪ್ರಾಶನ ಮಾಡಿ ಕೊಂದಿರುವುದಾಗಿ ತಿಳಿದುಬಂದಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
"ವಿಚಾರಣೆ ನಡೆಯುತ್ತಿದೆ, ಮತ್ತು ಸಾವಿಗೆ ನಿಜವಾದ ಕಾರಣ ಶೀಘ್ರದಲ್ಲೇ ತಿಳಿಯಲಿದೆ" ಎಂದು ಅವರು ಹೇಳಿದರು.
ಮರಣೋತ್ತರ ಪರೀಕ್ಷೆಯಲ್ಲಿ ಬಲೆ ಅಥವಾ ಗುಂಡೇಟಿನ ಗಾಯಗಳ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಮತ್ತು ಯಾವುದೇ ದೇಹದ ಭಾಗಗಳು ಕಾಣೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement