ಲಂಚ ಪಡೆಯುತ್ತಿದ್ದ ವೇಳೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ವಿಶೇಷ ಕರ್ತವ್ಯ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಕೆಪಿಟಿಸಿಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಇಂಧನ ಸಚಿವರ ಒಎಸ್‌ಡಿ ಜ್ಯೋತಿ ಪ್ರಕಾಶ್, ಅವರ ಕಾರು ಚಾಲಕ ನವೀನ್ ಎಂ ಅವರನ್ನು ಲಂಚಕ್ಕೆ ಬೇಡಿಕೆ ಇಟ್ಟ ಮತ್ತು ಸ್ವೀಕರಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಬ್ಯಾಡರಹಳ್ಳಿ ನಿವಾಸಿ ಅನಂತರಾಜು ಕೆ.ಎಂ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸ್ ಇಂಧನ ಸಚಿವರ ಒಎಸ್ ಡಿ ವಿರುದ್ಧ ಕೇಸ್ ದಾಖಲಿಸಿದ್ದು, ವಿದ್ಯುತ್ ಮಂಜೂರಾತಿಗಾಗಿ ಡಿಆರ್ ಡೆವಲಪರ್‌ಗೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಆರಂಭದಲ್ಲಿ ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರೂ. ನಂತರ ಆರೋಪಿಗಳು 50,000 ರೂಪಾಯಿಗೆ ಒಪ್ಪಿಕೊಂಡರು. ಅದರಂತೆ ಇಂದು ಹಣ ಸ್ವೀಕರಿಸುವ ಸಮಯದಲ್ಲಿ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಕನ್ನಡ ಪರ ಸಂಘಟನೆಯಿಂದ ಆನ್ಲೈನ್ ಗೇಮಿಂಗ್ ಕಂಪನಿ ಧ್ವಂಸ ಮಾಡಿರುವಂತಹ ಘಟನೆ ಕೋರಮಂಗಲದಲ್ಲಿ ನಡೆದಿದೆ. ಪ್ರತಿ ಭಾನುವಾರ ಅಕ್ರಮವಾಗಿ ಆನ್ಲೈನ್ ಗೇಮ್ ನಡೆಸ್ತಿದ್ದ ಆರೋಪ ಹಿನ್ನಲೆ ನಮ್ಮ ಕರ್ನಾಟಕ ಸೇನೆಯಿಂದ ಗೋಲ್ಡನ್ ಏಸಸ್ ಪೋಕರ್ ಬೆಟ್ಟಿಂಗ್ ಕಂಪನಿಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಲಾಗಿದೆ. ಕನ್ನಡ ಪರ ಸಂಘಟನೆ ದಾಳಿ ಮಾಡುತ್ತಿದ್ದಂತೆ ಗ್ರಾಹಕರು ಓಡಿಹೋದರು. ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ಅಭಯಾರಣ್ಯದಲ್ಲಿ ಹುಲಿಗೆ ವಿಷಪ್ರಾಶನ ಮಾಡಿಸಿದ ಆರೋಪದ ಮೇಲೆ ಅರಣ್ಯ ಇಲಾಖೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತ್ ಬಿಜೂರ್ ನೇತೃತ್ವದ ತಂಡ ಶನಿವಾರ ಹನೂರಿನಲ್ಲಿ ಸ್ಥಳಕ್ಕೆ ಭೇಟಿ ನೀಡಿ, ತನಿಖೆಯನ್ನು ಚುರುಕುಗೊಳಿಸಿದೆ. 12 ವರ್ಷ ವಯಸ್ಸಿನ ಹುಲಿ ದಾರಿ ತಪ್ಪಿ ಹೋಗಿತ್ತು. ಈ ವೇಳೆ ಜಾನುವಾರುಗಳನ್ನು ಬೇಟಿಯಾಡಿತ್ತು. ಹೀಗಾಗಿ ದುಷ್ಕರ್ಮಿಗಳು ಹುಲಿಗೆ ವಿಷಪ್ರಾಶನ ಮಾಡಿಸಿದ್ದರು ಎನ್ನಲಾಗಿದೆ. ಆರೋಪಿಗಳು ಹುಲಿಯ ಮೃತದೇಹವನ್ನು ಹೂಳಲು ಕಂದಕಕ್ಕೆ ಎಳೆದುಕೊಂಡು ಹೋಗಲು ಯತ್ನಿಸಿದ್ದಾರೆ. ಆದರೆ,250 ಕೆಜಿ ತೂಕದ ದೇಹವನ್ನು ಸ್ಥಳಾಂತರಿಸಲು ಸಾಧ್ಯವಾಗದೆ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ, ವಿವಿಧೆಡೆ ಹೂತಿದ್ದಾರೆ.
ಜಾತಿ ಸಮೀಕ್ಷೆಯನ್ನು ದಯವಿಟ್ಟು ಇಲ್ಲಿಗೆ ನಿಲ್ಲಿಸಿ. ಹುಚ್ಚರ ಸಂತೆಯಲ್ಲಿ ಯಾರೂ ಬಂದು ನಿಲ್ಲಬೇಡಿ” ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯನಗರ ನಿವಾಸದ ಬಳಿ ಮಾತನಾಡಿದ ಅವರು, “ಸಿದ್ದರಾಮಯ್ಯ ಕೆಲಸಕ್ಕೆ ಬಾರದ ಕೆಲಸ ಸೃಷ್ಟಿ ಮಾಡಿದ್ದಾರೆ. ಸುಮಾರು 1 ಗಂಟೆ 4 ನಿಮಿಷ ಸಮೀಕ್ಷಾದಾರರು ನನ್ನ ಮಾಹಿತಿ ಪಡೆದಿದ್ದಾರೆ. ಇದೊಂದು ಅವೈಜ್ಞಾನಿಕ ಸಮೀಕ್ಷೆ ಆಗಿದೆ. ತಾಂತ್ರಿಕ ಸಮಸ್ಯೆಯಿಂದ ಕೂಡಿದೆ. ಇನ್ನೊಂದು ಕಾಂತರಾಜ್ ಸಮಿತಿ ಆಗುತ್ತದೆ ಅಷ್ಟೇ. ಅನಾವಶ್ಯಕವಾಗಿ ಮಾಡುವ ಗೊಂದಲದಿಂದ ಸರ್ಕಾರಕ್ಕೆ ಸರಿಯಾದ ಮಾಹಿತಿ ಕೊಡಲ್ಲ.
ಇದರಲ್ಲಿ ಸರ್ಕಾರ ಸಾಧನೆ ಮಾಡಲು ಯಾವುದೂ ಸಿಗಲ್ಲ. ಅವೈಜ್ಞಾನಿಕ ಗಣತಿಯಿಂದ ಮಾಹಿತಿ ಸಿಗಲ್ಲ. ಇದನ್ನು ಇನ್ನೂ ಸರಳೀಕರಣ ಮಾಡಿ. ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಗೊತ್ತಿಲ್ಲ. ಸುಮಾರು ಅಧಿಕಾರಿಗಳು ಕೇಳಿದ ಮಾಹಿತಿ ಅನಾವಶ್ಯಕವಾಗಿತ್ತು. ಇದರಿಂದ ಜನರು ಗೊಂದಲ ಒಳಗಾಗುತ್ತಾರೆ” ಎಂದರು.
ಬೆಂಗಳೂರಿಗರ ಜೀವನಾಡಿ ಆಗಿರುವ ನಮ್ಮ ಮೆಟ್ರೋಗೆ 'ಬಸವ ಮೆಟ್ರೋ' ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಗೇಟ್ ಸಂಖ್ಯೆ 4ರ ಗಾಯತ್ರಿ ವಿಹಾರದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಬಣ್ಣಿಸಿದರು. ಬಸವ ತತ್ವಗಳು ಸಂವಿಧಾನದ ಆಶಯಗಳೊಂದಿಗೆ ಹೊಂದಿಕೊಂಡಿವೆ. ಮುಂದಿನ ವರ್ಷ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿಯೂ ಭರವಸೆ ನೀಡಿದರು.
Advertisement