
ಹೊಸಪೇಟೆ: 5.25 ಕೋಟಿ ರೂ. ಇನ್ಸೂರೆನ್ಸ್ ಹಣಕ್ಕಾಗಿ ವ್ಯಕ್ತಿಯನ್ನು ಕೊಲೆ ಮಾಡಿ, ಅದನ್ನು ಅಪಘಾತವೆಂದು ಬಿಂಬಿಸಿದ ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯ ಕೌಲ್‌ಪೇಟೆ ನಿವಾಸಿ ಗಂಗಾಧರ್ (34) ಎಂದು ಗುರುತಿಸಲಾಗಿದೆ.
ಗಂಗಾಧರ್ ನನ್ನು ಕಳೆದ ಬುಧವಾರ ಆತನ ಪತ್ನಿಯಂತೆ ನಟಿಸಿದ ಮಹಿಳೆ ಸೇರಿದಂತೆ ಆರು ಜನರ ತಂಡ ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಗಂಗಾಧರನನ್ನು ಕೊಲೆ ಮಾಡಿ, ಎಕ್ಸೆಲ್ ಬೈಕ್ ಮೇಲೆ ಕೂರಿಸಿ ಕಾರಿನಿಂದ ಗುದ್ದಿ ಆರೋಪಿಗಳು ಪರಾರಿಯಾಗಿದ್ದರು. ಹೊಸಪೇಟೆ ನಗರದ ಸಂಡೂರು ರಸ್ತೆಯಲ್ಲಿ ಈ ಕೊಲೆ ನಡೆದಿತ್ತು.
ಕೊಲೆಯಾದ ಗಂಗಾಧರನ ಹೆಂಡತಿ ಶಾರದಾ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಓರ್ವ ಮಹಿಳೆ ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿ ಕೃಷ್ಣಪ್ಪ, ಕೊಪ್ಪಳ ಜಿಲ್ಲೆಯ ಹೊಸಲಿಂಗಾಪುರ ಗ್ರಾಮದ ನಿವಾಸಿ ರವಿ ಗೋಸಂಗಿ, ವಿಜಯನಗರ ಜಿಲ್ಲೆಯ ಹೊಸಪೇಟೆ ನಿವಾಸಿಗಳಾದ ಅಜೆಯ, ರಿಯಾಜ್, ಯೋಗರಾಜ್ ಸಿಂಗ್, ಹಾಗೂ ನಕಲಿ ಹೆಂಡತಿ ಹುಲಿಗೆಮ್ಮ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು, ಬೈಕ್ ವಶಪಡಿಸಿಕೊಳ್ಳಲಾಗಿದೆ.
ಹೆಂಡತಿಯಿಂದ ದೂರವಿದ್ದ ಗಂಗಾಧರನಿಗೆ ಕೈಗೆ ಸ್ಟ್ರೋಕ್ ಹೊಡೆದಿತ್ತು. ಅದನ್ನೇ ಬಂಡವಾಳ ಮಾಡಿಕೊಂಡ ಗ್ಯಾಂಗ್ ಆತನ ಹೆಸರಿನಲ್ಲಿ ಇನ್ಶೂರೆನ್ಸ್ ಮಾಡಿಸಿ, ಆತನಿಗೆ ಎರಡನೇ ನಕಲಿ ಮದುವೆ ಮಾಡಿ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ರಿಜಿಸ್ಟರ್ ಸಹ ಮಾಡಿಸಿದ್ದರು. ಹಣದ ಆಮಿಷ ತೋರಿಸಿ ಹೊಟೇಲ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಹುಲಿಗೆಮ್ಮ ಎಂಬ ಮಹಿಳೆಯನ್ನ ಕರೆತಂದು ಗಂಗಾಧರನಿಗೆ ಈ ಗ್ಯಾಂಗ್ ಮದುವೆ ಮಾಡಿಸಿತ್ತು. ಎರಡನೇ ನಕಲಿ ಹೆಂಡತಿ ಹುಲಿಗೆಮ್ಮ ಹೆಸರಲ್ಲಿ ನಾಮಿನಿ ಮಾಡಿಸಿ, ಗಂಗಾಧರನ ಕೊಲೆ ಮಾಡಿ ಅಪಘಾತವೆಂಬಂತೆ ಬಿಂಬಿಸಿದ್ದರು.
Advertisement