ಹಾಸನಾಂಭ ಉತ್ಸವದಲ್ಲಿ VIP ಸಂಸ್ಕೃತಿಗೆ ಬ್ರೇಕ್- ಜನಸ್ನೇಹಿ ಉತ್ಸವಕ್ಕೆ ಅವಕಾಶ: ಕೃಷ್ಣ ಬೈರೇಗೌಡ

ಈ ವರ್ಷದಿಂದ ಇದಕ್ಕೆ ಸಾಂಸ್ಕೃತಿಕ ತಿಲಾಂಜಲಿ ಹಾಡಲಾಗುವುದು. ಅಲ್ಲದೆ, ಜನಸ್ನೇಹಿ ಹಾಸನಾಂಭ ಉತ್ಸವಕ್ಕೆ ಕರೆ ನೀಡಲಾಗುವುದು ಎಂದು ಭರವಸೆ ನೀಡಿದರು. ಕಳೆದ ವರ್ಷ ಹಾಸನದಲ್ಲಿ ವಿಐಪಿಗಳ ಎಸ್ ಕಾರ್ಟ್​ಗಳದ್ದೇ ಸದ್ದು ಹೆಚ್ಚಾಗಿತ್ತು.
krishna byeregowda
ಕಂದಾಯ ಸಚಿವ ಕೃಷ್ಣ ಬೈರೇಗೌಡ
Updated on

ಬೆಂಗಳೂರು: ನಾಡಿನ ಪ್ರಸಿದ್ಧ ಹಾಸನಾಂಭ ಉತ್ಸವದಲ್ಲಿ ಪ್ರಸ್ತುತ ವರ್ಷದಿಂದ ವಿಐಪಿ ಸಂಪ್ರದಾಯಕ್ಕೆ ಬ್ರೇಕ್ ನೀಡಿ ಜನಸ್ನೇಹಿ ಉತ್ಸವಕ್ಕೆ ಕರೆ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಹಾಸನ ಜಿಲ್ಲೆಯ ಶಾಸಕರು, ಸಂಸದರು ಹಾಗೂ ಅಧಿಕಾರಿಗಳ ಜೊತೆಗಿನ ಸಭೆಯ ನಂತರ ಮಾತನಾಡಿದ ಅವರು, ಹಾಸನಾಂಭ ಉತ್ಸವದಲ್ಲಿ ವಿಐಪಿ ಸಂಸ್ಕೃತಿಯಿಂದ ಸ್ಥಳೀಯರು ಬೇಸತ್ತಿದ್ದು, ಈ ವರ್ಷದಿಂದ ಇದಕ್ಕೆ ಸಾಂಸ್ಕೃತಿಕ ತಿಲಾಂಜಲಿ ಹಾಡಲಾಗುವುದು. ಅಲ್ಲದೆ, ಜನಸ್ನೇಹಿ ಹಾಸನಾಂಭ ಉತ್ಸವಕ್ಕೆ ಕರೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಳೆದ ವರ್ಷ ಹಾಸನದಲ್ಲಿ ವಿಐಪಿಗಳ ಎಸ್ ಕಾರ್ಟ್​ಗಳದ್ದೇ ಸದ್ದು ಹೆಚ್ಚಾಗಿತ್ತು. ಆದರೆ, ಈ ವರ್ಷ ಇದಕ್ಕೆ ಅವಕಾಶ ನೀಡಲಾಗುವುದಿಲ್ಲ. ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಮಾಜಿ ಪ್ರಧಾನಿಗಳಿಗೆ ಮಾತ್ರ ಎಸ್ಕಾರ್ಟ್ ವ್ಯವಸ್ಥೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಶಾಸಕರು, ಸಚಿವರು, ನ್ಯಾಯಾಧೀಶರು, ಕ್ರೀಡಾಪಟುಗಳು, ಸಿನಿಮಾ ತಾರೆಯರು ಸೇರಿದಂತೆ ಉಳಿದ ಗಣ್ಯ ವ್ಯಕ್ತಿಗಳು ತಾವು ದೇವಾಲಯಕ್ಕೆ ಭೇಟಿ ನೀಡುವ ಬಗ್ಗೆ ಇ-ಮೇಲ್ ಅಥವಾ ಫೋನ್ ಕರೆಗಳ ಮೂಲಕ ಮೊದಲೇ ತಿಳಿಸಬೇಕು. ಮಾಹಿತಿ ನೀಡುವ ಗಣ್ಯವ್ಯಕ್ತಿಗಳನ್ನು ಜಿಲ್ಲಾಡಳಿತ ಏರ್ಪಡಿಸಿರುವ ವಾಹನದಲ್ಲಿ ದೇವಾಲಯಕ್ಕೆ ಕರೆತಂದು ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.

krishna byeregowda
ಹಾಸನಾಂಬ ದೇವಿ ಜಾತ್ರೆ ಉತ್ಸವ: ಆದಾಯದಲ್ಲಿ ಹೊಸ ದಾಖಲೆ ಸೃಷ್ಟಿ!

ಗಣ್ಯ ವ್ಯಕ್ತಿಗಳಿಗೆ ತಮ್ಮ ಕುಟುಂಬದ ನಾಲ್ಕು ಜನ ಸದಸ್ಯರನ್ನು ಜೊತೆಗೆ ಕರೆತರಲು ಅವಕಾಶ ನೀಡಲಾಗಿದೆ. ಆದರೆ, ಯಾವುದೇ ಖಾಸಗಿ ವಾಹನಗಳ ಮೂಲಕ ದೇವಾಲಯಕ್ಕೆ ಆಗಮಿಸಲು ಅವಕಾಶ ಇಲ್ಲ ಎಂದು ಸಚಿವರು ಹೇಳಿದರು.

ಇದಲ್ಲದೆ, 1000 ರೂ. ಹಾಗೂ 300 ರೂ. ಬೆಲೆಯ ಪಾಸ್​​ಗಳನ್ನೂ ವಿತರಿಸಲಾಗುವುದು. ಪಾಸ್ ಪಡೆದವರಿಗೆ ದೇವರ ದರ್ಶನದ ಜೊತೆಗೆ ಪ್ರಸಾದವನ್ನೂ ನೀಡಲಾಗುವುದು. ಒಂದು ಪಾಸ್​​ಗೆ ಒಬ್ಬರಿಗೆ ಮಾತ್ರ ಅವಕಾಶ ಇರಲಿದೆ. ಎಸ್ಕಾರ್ಟ್ ನಲ್ಲಿ ಆಗಮಿಸುವವರಿಗೆ ಬೆಳಗ್ಗೆ 10.30 ರಿಂದ 12.30ರ ವರೆಗೆ ಅವಕಾಶ ಇರಲಿದೆ. ಪಾಸ್ ಪಡೆದವರಿಗೆ ಬೆಳಗ್ಗೆ 7.30 ರಿಂದ 10ರ ನಡುವೆ ಪ್ರವೇಶ ನೀಡಲಾಗುವುದು. ಒಂದು ದಿನಕ್ಕೆ 1000 ಪಾಸ್​ಗಳನ್ನು ಮಾತ್ರ ವಿತರಿಸಲಿದ್ದು, ಸಮಯ ಮೀರಿ ಬಂದವರಿಗೆ ಅವಕಾಶ ಇರುವುದಿಲ್ಲ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜನ ಸಂದಣಿ ನಿಯಂತ್ರಿಸುವ ಸಲುವಾಗಿ 2000 ಪೊಲೀಸರನ್ನು ನಿಯೋಜಿಸಲಾಗಿದೆ. 280ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲಾಗಿದೆ. ಡ್ರೋನ್ ಕ್ಯಾಮರಾ ಸಹ ಬಳಕೆಯಲ್ಲಿದ್ದು, ಎಲ್ಲವಕ್ಕೂ ಎಐ ತಂತ್ರಜ್ಞಾನ ಬಳಸಲಾಗಿದೆ. ಸ್ಥಳದಲ್ಲೇ ಕಂಟ್ರೋಲ್ ರೂಂ ನಿರ್ಮಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯಲು ಆಸ್ಪದ ನೀಡುವುದಿಲ್ಲ ಎಂದು ತಿಳಿಸಿದರು.

ಅಕ್ಟೋಬರ್ 9 ರಿಂದಲೇ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ಮೂರು ವೇದಿಕೆ ಸಿದ್ಧಪಡಿಸಲಾಗಿದ್ದು, ಒಂದು ವೇದಿಕೆಯಲ್ಲಿ ಜಾನಪದ ಜಾತ್ರೆ ನಡೆಸಲಾಗುವುದು. ಈ ವೇದಿಕೆಯಲ್ಲಿ ನಾಡಿನ ನಾನಾ ಭಾಗದ ಜಾನಪದ ಕಲಾವಿದರು ಆಗಮಿಸಿ ನೃತ್ಯ ಪ್ರದರ್ಶಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com